ನ್ಯೂಸ್ ನಾಟೌಟ್: ಭವಿಷ್ಯದ ಶಿಕ್ಷಕಿಯರನ್ನು ರೂಪುಗೊಳಿಸುವ ಬೆಳ್ಳಾರೆಯ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿ ಶಿಕ್ಷಕಿಯರೇ ರಚಿಸಿದ ಕಲಿಕಾ ಮಾದರಿಗಳು ಇದೀಗ ಗಮನ ಸೆಳೆಯುತ್ತಿವೆ.
ಬೆಳೆಯುತ್ತಿರುವ ಮಗುವಿಗೆ ಗುರುತಿಸಿ ಕಲಿಯಲು ಸಹಕಾರಿಯಾಗುವ ರೀತಿಯಲ್ಲಿ ಶಿಕ್ಷಕಿಯರನ್ನು ಬೆಳ್ಳಾರೆಯ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಿದ್ಧಪಡಿಸುತ್ತಾ ಬಂದಿದೆ. ಈ ಸಂಸ್ಥೆಯ 2023-24ನೇ ಸಾಲಿನ ಪ್ರದರ್ಶನ ತರಗತಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶಿಕ್ಷಕಿಯರುಗಳೇ ರಚಿಸಿದ ವಿವಿಧ ರೀತಿಯ ಅಧ್ಯಯನ ಮಾದರಿಗಳು ಗಮನ ಸೆಳೆಯಿತು. ಭಾರತ್ ಸೇವಕ್ ಸಮಾಜದ ಜಿಲ್ಲಾ ಸಂಯೋಜಕ ರಘುಕುಮಾರ್ ಪ್ರದರ್ಶನ ತರಗತಿ ಉದ್ಘಾಟಿಸಿದರು. ಮೌಲ್ಯಮಾಪಕರಾಗಿ ಕಾಸರಗೋಡಿನ ಶಿಕ್ಷಕ ಈಶ್ವರ ನಾಯ್ಕ, ಉಪ್ಪಳದ ನ್ಯೂ ಭಾರತ್ ಕಾಲೇಜಿನ ಸಂಜೀವ ಸಹಕರಿಸಿದರು. ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಕೌಶಲ್ಯ ತರಬೇತಿಗಳನ್ನು ನಡೆಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ಶಿಕ್ಷಕಿಯರು ಪ್ರತಿ ವರ್ಷ ವಿಭಿನ್ನ ರೀತಿಯ ಕಲಿಕಾ ಮಾದರಿಗಳನ್ನು ಪ್ರದರ್ಶನ ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ ಅನ್ನೋದು ವಿಶೇಷ.