ನ್ಯೂಸ್ ನಾಟೌಟ್: ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ನೋಟಿಸ್ಗೆ ಪ್ರತಿಕ್ರಿಯಿಸಲು ವಿಫಲವಾದ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ(ಮಾ.19) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಕಂಪನಿಯ ಸಹ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮ್ದೇವ್ ಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.
ಪತಂಜಲಿ ಆಯುರ್ವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಎಂಬವರಿಗೂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ವರದಿ ತಿಳಿಸಿದೆ. ತನ್ನ ಉತ್ಪನ್ನಗಳು ಮತ್ತು ಅವುಗಳ ಔಷಧೀಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ ಸುಳ್ಳು ಅಂಶಗಳಿರುವ ಜಾಹೀರಾತು ನೀಡಬಾರದು ಎಂದು ಪತಂಜಲಿ ಆಯುರ್ವೇದ ಸಂಸ್ಥೆಗೆ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಪ್ರಾರಂಭಿಸಬಾರದು ಎಂದು ಕೇಳಿ ಪತಂಜಲಿಗೆ ನೋಟಿಸ್ ನೀಡಿತ್ತು. ಆಯುರ್ವೇದ ಹೆಸರಲ್ಲಿ ಜನರ ದಾರಿ ತಪ್ಪಿಸುವ ಜಾಹೀರಾತು ನೀಡುತ್ತಿದೆ ಎಂಬ ದೂರಿನ ಮೇರೆಗೆ ಬಾಬಾ ರಾಮದೇವ್ ಪತಂಜಲಿ ಆಯುರ್ವೇದ ಸಂಸ್ಥೆಯ ಔಷಧಿಗಳ ಪ್ರಚಾರದ ಜಾಹೀರಾತುಗಳ ಮೇಲೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಮೂಲಕ ನಿರ್ಬಂಧ ಹೇರಿತ್ತು. ಎಲೆಕ್ಟ್ರಾನಿಕ್ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ನೀಡದಂತೆ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ನ್ಯಾಯಪೀಠವು ಖಡಕ್ ನಿರ್ದೇಶನ ನೀಡಿತ್ತು.
ಪಂತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸುಳ್ಳು ಹಾಗೂ ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡುತ್ತಿರುವ ಪತಂಜಲಿ ವಿರುದ್ಧ ಕ್ರಮ ತೆಗೆದುಕೊಳ್ಳದ ಕೇಂದ್ರ ಸರಕಾರದ ವಿರುದ್ಧವೂ ಅಸಮಾಧಾನ ತೋರಿತ್ತು. ಇಷ್ಟಲ್ಲದೆ ಕೋರ್ಟ್ ಆದೇಶ ಮೀರಿದರೆ ಒಂದು ಕೋಟಿ ರೂಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನು ನ್ಯಾಯಮೂರ್ತಿ ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಕೊಟ್ಟಿತ್ತು. ಹೀಗಿದ್ದೂ ಕೋರ್ಟ್ ಆದೇಶ ಮೀರಿದ ಹಿನ್ನೆಲೆಯಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್ ಹಾಗೂ ಸಿಇಒ ಬಾಲಾಕೃಷ್ಣಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದ ಸುಪ್ರೀಂ ಕೋರ್ಟ್, ಮೂರು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಖಡಕ್ ಸೂಚನೆ ನೀಡಿದೆ ಎನ್ನಲಾಗಿದೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/