ನ್ಯೂಸ್ ನಾಟೌಟ್: ಅಯೋಧ್ಯೆ ರಾಮಮಂದಿರಕ್ಕಾಗಿ ರಾಮಲಲ್ಲಾ ವಿಗ್ರಹವನ್ನು ರಚಿಸಿದ ಶಿಲ್ಪಿ ಅರುಣ್ ಯೋಗಿರಾಜ್ ʼಬಾಲ ರಾಮನʼ ದೇವರ ಶಿಲ್ಪ ಕೆತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅರುಣ್ ಯೋಗಿರಾಜ್ ಹಂಚಿಕೊಂಡಿದ್ದಾರೆ. ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ತಾವು ಅಯೋಧ್ಯೆಯಲ್ಲಿ ಬಿಡುವಿನ ವೇಳೆಯಲ್ಲಿ ʻಚಿಕ್ಕ ರಾಮಲಲ್ಲಾ ಮೂರ್ತಿ’ಯನ್ನು ಕೆತ್ತಿರುವುದಾಗಿ ಹಂಚಿಕೊಂಡಿದ್ದಾರೆ.
“ರಾಮ ಲಲ್ಲಾನ ಮುಖ್ಯ ಮೂರ್ತಿಯನ್ನು ಆಯ್ಕೆ ಮಾಡಿದ ನಂತರ ನಾನು ಅಯೋಧ್ಯೆಯಲ್ಲಿ ನನ್ನ ಬಿಡುವಿನ ವೇಳೆಯಲ್ಲಿ ಮತ್ತೊಂದು ಸಣ್ಣ ರಾಮ್ ಲಲ್ಲಾ ಮೂರ್ತಿಯನ್ನು ಕಲ್ಲಿನಲ್ಲಿ ಕೆತ್ತಿದ್ದೇನೆ” ಎಂದು ಯೋಗಿರಾಜ್ ಎಕ್ಸ್ನಲ್ಲಿ ಪ್ರಕಟಿಸಿದ್ದಾರೆ. ಈ ಸಣ್ಣ ವಿಗ್ರಹವು ಮೂಲ ವಿಗ್ರಹದ ಕಪ್ಪು ಕಲ್ಲಿಗಿಂತ ಭಿನ್ನವಾದ, ತುಸು ಬಿಳುಪಾದ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ. ಆದರೆ ʼಬಾಲಕ ರಾಮ’ನ ಶಿಲ್ಪದ ಪಡಿಯಚ್ಚಿನಂತಿದೆ. ಮೂಲ ಮೂರ್ತಿಯ ಎಲ್ಲ ಲಕ್ಷಣಗಳು ಇದರಲ್ಲೂ ಇವೆ. ಆದರೆ ಇದನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದು ಎನ್ನಲಾಗಿದೆ.
ಕಳೆದ ತಿಂಗಳು ಅಯೋಧ್ಯೆಯ ದೇವಾಲಯದ ಗರ್ಭಗುಡಿಯೊಳಗೆ ಎಂಟು ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ಇರಿಸಲಾಗಿರುವ ಬಾಲಕ ರಾಮ ವಿಗ್ರಹದ ಕಣ್ಣುಗಳನ್ನು ಕೆತ್ತಲು ಬಳಸಿದ ವಿಶೇಷ ಉಪಕರಣಗಳ ಚಿತ್ರವನ್ನು ಅರುಣ್ ಯೋಗಿರಾಜ್ ಹಂಚಿಕೊಂಡಿದ್ದರು. “ನಾನು ಅಯೋಧ್ಯೆಯ ರಾಮ ಲಲ್ಲಾನ ದಿವ್ಯ ಕಣ್ಣುಗಳನ್ನು ಕೆತ್ತಿದ ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆ” ಎಂದು ಅವುಗಳ ಚಿತ್ರವನ್ನು ಹಂಚಿಕೊಳ್ಳುವಾಗ ಯೋಗಿರಾಜ್ ಬರೆದಿದ್ದರು ಎನ್ನಲಾಗಿದೆ.