ನ್ಯೂಸ್ ನಾಟೌಟ್: ಇತ್ತೀಚಿಗೆ ಸುಳ್ಯ ಪೊಲೀಸರು ಪರವಾನಗಿ ಇಲ್ಲದೆ ಮರಳು ಸಾಗಾಟ ಮಾಡುತ್ತಿರುವ ವಾಹನಗಳ ಹಾಗೂ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಕಳೆದ ಕೆಲವು ದಿನಗಳಿಂದ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವ ಪೊಲೀಸರು ಇದೀಗ ಅರಂತೋಡು ಜಂಕ್ಷನ್ ಬಳಿಯಿಂದ ಬೆಳ್ ಬೆಳಗ್ಗೆ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಸುಳ್ಯ ಪೊಲೀಸ್ ಠಾಣೆಯ ಅಪರಾಧ ತನಿಖಾ ವಿಭಾಗದ ಉಪ ನಿರೀಕ್ಷಕರಾದ ಸರಸ್ವತಿಯವರು ಕಲ್ಲುಗುಂಡಿ ಕಡೆಯಿಂದ ತಮ್ಮ ಸಿಬ್ಬಂದಿಗಳೊಂದಿಗೆ ಸುಳ್ಯ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಮರಳು ತುಂಬಿದ ಲಾರಿಯೊಂದು ರಸ್ತೆಯಲ್ಲಿ ನಿಂತಿತ್ತು. ಈ ವೇಳೆ ಪೊಲೀಸರು ಲಾರಿ ಚಾಲಕನನ್ನು ವಿಚಾರಿಸಲು ತೆರಳಿದ ಸಂದರ್ಭ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ತಕ್ಷಣ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಸುಳ್ಯ ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.