ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಎರಡು ತಿಂಗಳಿಂದ ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳು ಇನ್ನೂ ಅಂಗನವಾಡಿಯಿಂದ ಸಿಕ್ಕಿಲ್ಲ..!ಇದರಿಂದ ಮಕ್ಕಳು, ಗರ್ಭಿಣಿಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಅಂಗನವಾಡಿ ಕಾರ್ಯಕರ್ತರಿಗೂ ವೇತನವಿಲ್ಲ, ಕೆಲವು ಭಾಗದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಆಹಾರವಿಲ್ಲದೇ ಪಾಲಕರ ಕೈಯಿಂದಲೇ ಅಕ್ಕಿ ತಂದು ಬೇಯಿಸಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಗನವಾಡಿಯಲ್ಲಿ ಮಕ್ಕಳಿಗೆ ಗರ್ಭಿಣಿ-ಬಾಣಂತಿಯರಿಗೆ ಆಹಾರ ನೀಡಲಾಗುತ್ತಿತ್ತು. ಜನವರಿಯ ಬಳಿಕ ಅನುದಾನ ಸಮರ್ಪಕವಾಗಿ ಬಾರದ ಹಿನ್ನೆಲೆ ಸಂಕಷ್ಟ ಎದುರಾಗಿದೆ. ಹೆಚ್ಚಿನ ಅಂಗನವಾಡಿಯಲ್ಲಿ ಆಹಾರವೇ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ.ಇತ್ತ ಅಂಗನವಾಡಿ ಶಿಕ್ಷಕಿಯರಿಗೆ ಹಾಗೂ ಸಹಾಯಕರಿಗೆ ನೀಡಲಾಗುತ್ತಿದ್ದ ವೇತನವು ಜನವರಿ ಹಾಗೂ ಫೆಬ್ರವರಿಯಿಂದ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಅಂಗನವಾಡಿಗಳ ವಿದ್ಯುತ್ ಬಿಲ್ ಸೇರಿದಂತೆ ಖಾಸಗಿ ಕಟ್ಟಡದಲ್ಲಿರುವ ಕಚೇರಿಗಳ ಬಾಡಿಗೆ ನೀಡಲೂ ಅನುದಾನ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಅಂಗನವಾಡಿ ಕಾರ್ಯಕರ್ತೆಯರ ಕೂಗು ಕೇಳುವವರೇ ಇಲ್ಲದಂತಾಗಿದೆ. ಇವರಿಗೆ ಕೇವಲ ಅಂಗವಾಡಿ ಮಾತ್ರವಲ್ಲದೇ ಹೆಚ್ಚುವರಿ ಜವಾಬ್ದಾರಿಗಳು ತಲೆ ಮೇಲೆ ಇದ್ದು, ಚುನಾವಣಾ ಕೆಲಸ, ಆರೋಗ್ಯ ಇಲಾಖೆಯ ವಿವಿಧ ಸರ್ವೇ ಕಾರ್ಯ, ಜನಗಣತಿ ಸೇರಿ ವಿವಿಧ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗುತ್ತಿದೆ.ಆದರೆ ಅವರ ಗೋಳಿಗೆ ಸ್ಪಂದಿಸುವವರೇ ಇಲ್ಲವೆಂಬಂತಾಗಿದೆ.ಇದಕ್ಕೆಲ್ಲ ಕಾರಣ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಎನ್ನುವ ಮಾತುಗಳು ಕೇಳಿ ಬಂದಿವೆ.ಮತ್ತೊಂದೆಡೆ ಅಧಿಕಾರಿಗಳು ಸಮರ್ಪಕ ಅನುದಾನದ ಬೇಡಿಕೆ ಸಲ್ಲಿಸದೇ ಇರುವುದೂ ಇದಕ್ಕೆ ಕಾರಣ ಎಂಬ ಮಾತೂ ಕೇಳಿ ಬರುತ್ತಿದೆ.
ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯಾಗಬಾರದು, ಬೆಳೆಯುತ್ತಿರುವ ಮಕ್ಕಳ ಆರೋಗ್ಯ ಮುಖ್ಯ,ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಉದ್ದುದ್ದ ಭಾಷಣವನ್ನು ಕೇವಲ ಮೈಕ್ನಲ್ಲಿ ಮಾತ್ರ ಕೇಳುತ್ತೇವೆ ವಿನಃ ಇಂತಹ ಮಕ್ಕಳ, ಮಹಿಳೆಯರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.ಈ ಬಡ ಮಕ್ಕಳನ್ನು ನೋಡಿದಾಗ ಎಂಥವರಿಗಾದರೂ ಹೊಟ್ಟೆ ಚುರ್ರೆನ್ನದಿರದು.ಒಟ್ಟಿನಲ್ಲಿ ಮಕ್ಕಳಿಗೆ ,ಅಂಗನವಾಡಿ ಕಾರ್ಯಕರ್ತೆಯರಿಗೆ,ಗರ್ಭಿಣಿ-ಬಾಣಂತಿಯರಿಗೆ ಆಗಿರುವ ಸಮಸ್ಯೆಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು, ಸರ್ಕಾರ ಇನ್ನಾದರೂ ಕೂಡಲೇ ಸ್ಪಂದಿಸಬೇಕಾಗಿದೆ.