ನ್ಯೂಸ್ ನಾಟೌಟ್:ಚಾರಣ ಅಂದ್ರೆ ಸಾಮಾನ್ಯದ ಮಾತಲ್ಲ.ಇದನ್ನು ಬಹುತೇಕ ಮಂದಿ ಇಷ್ಟ ಪಡುತ್ತಾರೆ.ಮುಖ್ಯವಾಗಿ ಬೆಟ್ಟ ಗುಡ್ಡ ಶಿಖರಗಳನ್ನೇ ಗುರಿಯಾಗಿಸಿ ಚಾರಣ ಹೊರಡುವ ಅನೇಕ ಪ್ರಕೃತಿ ಪ್ರೇಮಿಗಳಿದ್ದಾರೆ.ಇಂತಹ ಚಾರಣದ ಮುಖೇನ ಅನೇಕರು ಹೆಸರು ಕೂಡ ಮಾಡಿದ್ದಾರೆ.ಅಂಥವರಲ್ಲಿ ಬೆಂಗಳೂರು ಮೂಲದ ಆದ್ಯಾ ಬೆನ್ನೂರು ಕೂಡ ಒಬ್ಬರು ಎಂದೇ ಹೇಳಬಹುದು.
ಈ ಹುಡುಗಿಗೆ ಕೇವಲ 8 ವರ್ಷ ವಯಸ್ಸು.ಆದರೆ ಈ ಪುಟ್ಟ ವಯಸ್ಸಲ್ಲಿ ಈಕೆಯ ಸಾಧನೆ ನೋಡಿದ್ರೆ ನೀವು ಬೆರಗಾಗ್ತೀರಿ.ಅನೇಕ ರೀತಿಯ ಸವಾಲುಗಳನ್ನು ಎದುರಿಸಿ ಈಕೆ ಈ ಸಾಧನೆ ಮಾಡಿದ್ದಾರೆ.ಅದೆಷ್ಟೋ ತೊಂದರೆಗಳನ್ನು ಎದುರಿಸಿದ ಆದ್ಯಾ ಕಡೆಗೂ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ್ದಾರೆ.ಅಷ್ಟೇ ಅಲ್ಲದೆ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯಳು ಎಂಬ ಕೀರ್ತಿಗೆ ಆದ್ಯಾ ಭಾಜನರಾಗಿದ್ದಾರೆ.
ಎಂಟು ದಿನಗಳಲ್ಲಿ 65 ಕಿಮೀ ಭಯಾನಕ ಭೂಪ್ರದೇಶವನ್ನು ಚಾರಣ ಮಾಡಿದ ಬೆಂಗಳೂರಿನ ಆದ್ಯಾ, ತನ್ನ ತಂದೆ ಹರ್ಷ ಬೆನ್ನೂರ್ ಜೊತೆ, ಜೂನ್ 24 ರಂದು ಎವರೆಸ್ಟ್ ಬೇಸ್ ಕ್ಯಾಂಪ್’ನಲ್ಲಿ 5,364 ಮೀ ಎತ್ತರದಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ್ದಾರೆ.ಈ ಚಾರಣದ ಸಂದರ್ಭದಲ್ಲಿ ಆದ್ಯಾ ಕೇವಲ ಗುರಿಯ ಬಗ್ಗೆ ಯೋಚಿಸದೇ ಸ್ವಚ್ಛತೆಗೂ ಆದ್ಯತೆ ನೀಡುತ್ತಾ ಬಂದಿದ್ದಾಳೆ. ತನ್ನ ಹಾದಿಯಲ್ಲಿ ಸಿಗುತ್ತಿದ್ದ ಕಸವನ್ನು ಸಂಗ್ರಹಿಸುತ್ತಾ, ಪರ್ವತದ ತುದಿ ತಲುಪಿದ್ದಾಳೆ.