ನ್ಯೂಸ್ ನಾಟೌಟ್ :ಹೆತ್ತ ತಾಯಿಯೇ ತನ್ನ ಮೂರುವರೆ ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿದ್ದಲ್ಲದೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಹೃದಯ ವಿದ್ರಾವಕ ಘಟನೆ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ನಡೆದಿತ್ತು.ಆ ಕಂದಮ್ಮನಿಗಾಗಿ ರಾಜ್ಯದಾದ್ಯಂತ ಜನರ ಹೃದಯ ಮಿಡಿದಿದೆ.ಮಗುವಿನ ತಾಯಿ ಹಾಗೂ ತಾಯಿಯ ಪ್ರಿಯಕರನನ್ನು ಬಂಧಿಸಲಾಗಿದೆ.ಈ ಮಧ್ಯೆ ಆ ಅನಾಥ ಮಗುವಿಗೆ ನೆರವಾಗುವುದಾಗಿ ನಟ ಧ್ರುವ ಸರ್ಜಾ ಹೇಳಿದ್ದಾರೆ.
ಸ್ಟಾಲಿನ್ ಎಂಬ ಪುಟ್ಟ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದ ಶಾರಿನ್ ತನ್ನ ಗೆಳೆಯನ ಜತೆ ಸೇರಿ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದಳು ಎಂಬ ಅಂಶ ಕಳೆದ ಫೆಬ್ರವರಿ 19ರಂದು ಮಹಿಳಾ ಸಂಘಟನೆಯವರ ಸಕಾಲಿಕ ಮಧ್ಯಪ್ರವೇಶದಿಂದ ಬೆಳಕಿಗೆ ಬಂದಿತ್ತು.ರಾಜೇಶ್ವರಿ ಮತ್ತು ಇತರ ಸಹೃದಯಿ ಮಹಿಳೆಯರು ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಮಗುವೊಂದು ದಿಗ್ಬಂಧನದಲ್ಲಿದೆ ಎಂಬ ಸುದ್ದಿ ತಿಳಿದು ಭೇಟಿ ನೀಡಿದಾಗ ಕರುಣಾಜನಕ ಕಥೆ ಬೆಳಕಿಗೆ ಬಂದಿತ್ತು. ಹಲ್ಲೆಗೀಡಾದ ಮೂರುವರೆ ವರ್ಷದ ಸ್ಟಾಲಿನ್ ಎಂಬ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ.
ಸದ್ಯ ಸರ್ಕಾರಿ ಶಿಶುಮಂದಿರದಲ್ಲಿ ಪಾಲನೆ ಮಾಡಲಾಗುತ್ತಿದೆ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಗುವಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಸ್ವಂತ ಮಗುವಿನೊಂದಿಗೆ ಹೆತ್ತ ತಾಯಿಯ ವರ್ತನೆ ಬಗ್ಗೆ ಕೇಳಿ ನೋವು ಹಾಗೂ ಅಸಮಾಧಾನ ವ್ಯಕ್ತಪಡಿಸಿದ ನಟ ಧ್ರುವ ಆ ಮುಗ್ಧ ಕಂದಮ್ಮನಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ ಅವರು ಮಗುವಿಗೆ ಏನು ಅಗತ್ಯವಿದೆಯೋ ಅದನ್ನ ಮಾಡ್ತೀನಿ. ಸರ್ಕಾರಿ ಶಿಶುಮಂದಿರಲ್ಲಿರುವ ಮಗುವನ್ನು ನಾನೇ ಭೇಟಿ ನೀಡಿ ಮಗುವನ್ನು ನೋಡಬೇಕು ಎಂಬ ಆಸೆಯಿದೆ. ಆದರೆ ಈ ಘಟನೆಯನ್ನು ಪ್ರಚಾರ ಅಂದುಕೊಳ್ಳಬಾರದು. ಅದಕ್ಕಾಗಿ ಏನೇ ಸಹಾಯ ಬೇಕಿದ್ರೂ ಮಾಡ್ತೀನಿ ಆದರೆ ಎಲ್ಲೂ ಗೊತ್ತಾಗಬಾರದು ದಯವಿಟ್ಟು ಪ್ರಚಾರ ಮಾಡಬೇಡಿ ಅಂತ ಕೇಳಿಕೊಂಡಿದ್ದಾರೆ.ಮಗು ಸ್ಟಾಲಿನ್ ಗೆ ತಾಯಿ ಶಾರಿನ್, ಪ್ರಿಯಕರನೊಂದಿಗೆ ಸೇರಿಕೊಂಡು ಮನಬಂದಂತೆ ದಿನನಿತ್ಯ ಹಲ್ಲೆ ನಡೆಸುತ್ತಿದ್ದಳು. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ; ಬೀಗ ಹಾಕಿ ಹೋಗುತ್ತಿದ್ದಳು. ಈ ವಿಷಯ ತಿಳಿದು ನೆರೆಹೊರೆಯ ದೂರಿನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಗು ಸ್ಟಾಲಿನ್ ನನ್ನು ರಕ್ಷಿಸಿದ್ದರು.ಈ ಘಟನೆ ಕುರಿತು ಗಿರಿನಗರ ಪೊಲೀಸರು ರಾಕ್ಷಸಿ ತಾಯಿ ಶಾರಿನ್ ಮತ್ತು ಆಕೆಯೊಂದಿಗೆ ಸೇರಿ ಮಗುವನ್ನು ಹಿಂಸಿಸಿದ ದುರುಳ ಬಾಯ್ಫ್ರೆಂಡ್ ದಿನೇಶ್ನನ್ನು ಬಂಧಿಸಿದ್ದಾರೆ.