ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು, ಪ್ರಚಾರದ (Loksabha Election Campaign) ಕಾರ್ಯ ಕೂಡ ಬಿರುಸು ಪಡೆದುಕೊಂಡಿದೆ.ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಚುರುಮುರಿ ವ್ಯಾಪಾರಿಯೋರ್ವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ 25,000 ಹಣ ನೀಡಿದ್ದು ಇದೀಗ ವೈರಲ್ ಆಗಿದೆ. ಮಾತ್ರವಲ್ಲ , ಈ ಮೂಲಕ ಅವರು ಅಭ್ಯರ್ಥಿಗೆ ಗೆಲ್ಲುವಂತೆ ಶುಭ ಹಾರೈಸಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಬೆಳಗ್ಗೆಯಿಂದ ಚಿಕ್ಕಮಗಳೂರು ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಪ್ರಚಾರಕ್ಕೆಂದು ಹೋದಾಗ ಚಿಕ್ಕಮಗಳೂರು ಹೊರವಲಯದ ತೇಗೂರು ಸರ್ಕಲ್ ನಲ್ಲಿನ ಚುರುಮುರಿ ವ್ಯಾಪಾರಿ ಲೊಕೇಶ್ ಬಾಬು ಅವರು ಕೋಟಾಗೆ 25 ಸಾವಿರ ಹಣವನ್ನ ಚುನಾವಣಾ ಖರ್ಚಿಗಾಗಿ ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ. ಹಣದ ಜೊತೆ ಎಲೆ-ಅಡಿಕೆ-ಬಾಳೆಹಣ್ಣು ಸೇರಿ ವಿವಿಧ ಹಣ್ಣುಗಳನ್ನ ನೀಡಿ ಚುನಾವಣೆಗೆ ಶುಭಕೋರಿದ್ದಾರೆ.
ಕಳೆದ 25 ವರ್ಷಗಳಿಂದ ತೇಗೂರು ಸರ್ಕಲ್ ನಲ್ಲಿ ಚುರುಮುರಿ ಅಂಗಡಿ ಇಟ್ಟಿರುವ ಲೊಕೇಶ್ ಬಿಜೆಪಿಯ ಅಪ್ಪಟ ಕಾರ್ಯಕರ್ತ. ಇಂದು ಕೋಟಾ ಪ್ರತಿಯೊಂದು ಅಂಗಡಿಗಳಿಗೆ ಹೋಗಿ ಮತಯಾಚನೆ ಮಾಡುವ ವೇಳೆ ಹಣ ನೀಡಿ ಶುಭಕೋರಿದ್ದಾರೆ. ಈ ವೇಳೆ ಕೋಟಾ ಜೊತೆಗಿದ್ದ ಸಿ.ಟಿ ರವಿ ಲೋಕೇಶ್ ರನ್ನ ಆತ್ಮೀಯವಾಗಿ ತಬ್ಬಿಕೊಂಡು ಕಾರ್ಯಕರ್ತರೇ ಬಿಜೆಪಿಯ ಶಕ್ತಿ ಎಂದು ವರ್ಣಿಸಿದ್ದಾರೆ.ಇಂದು ಮತ್ತು ನಾಳೆ ಚಿಕ್ಕಮಗಳೂರಿನಲ್ಲಿ ಪ್ರಚಾರ ಮಾಡಲಿರುವ ಕೋಟಾ ಶ್ರೀನಿವಾಸ ಪೂಜಾರಿ ಜಿಲ್ಲೆಯ ವಿವಿಧೆಡೆ ಪ್ರಚಾರ ಮಾಡಲಿದ್ದಾರೆ. ಇಂದು ಬೆಳಗ್ಗೆ ಯೋಗಶಾಲೆ, ಜಿಲ್ಲಾ ಆಟದ ಮೈದಾನದಲ್ಲಿ ವಾಕ್ ಮಾಡುತ್ತಿದ್ದವರನ್ನ ಭೇಟಿ ಮಾಡಿ ಮತಬೇಟೆ ನಡೆಸಿದ್ದಾರೆ. ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಕೋಟಾಗೆ ಮತದಾರರು ಬೆಂಬಲ ನೀಡುವಂತೆ ಭರವಸೆ ನೀಡಿದ್ದಾರೆ.