ನ್ಯೂಸ್ ನಾಟೌಟ್ : ಅಬ್ಬಬ್ಬಾ ..ಈ ರೀತಿಯ ದರೋಡೆ ಪ್ರಕರಣವನ್ನು ನಿವೇಂದು ಕೇಳಿರಲಿಕ್ಕಿಲ್ಲ. ಯಾಕೆಂದ್ರೆ ಇದು ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆಗಿರೋ ದರೋಡೆ ಪ್ರಕರಣ.ಸಾವಿರ ಅಲ್ಲ, ಲಕ್ಷವೂ ಅಲ್ಲ, ಕೋಟಿ ಕೋಟಿ ರೂ. ನಗದು ದರೋಡೆ.. ಒಂದು ಕ್ಷಣ ಈ ಸುದ್ದಿಯನ್ನು ಕೇಳಿದಾಗಲೇ ನೀವು ಶಾಕ್ ಗೊಳಗಾಗೋದು ಗ್ಯಾರಂಟಿ..!
ಈ ದರೋಡೆ ಪ್ರಕರಣ ಯಾವುದೇ ಚಲನಚಿತ್ರ ಅಥವಾ ವೆಬ್ ಸಿರೀಸ್ ತರಹ ಯಾವುದೇ ಕಾಲ್ಪನಿಕ ಕಥೆಯಲ್ಲ. ನೈಜ ಘಟನೆ. ಈ ಘಟನೆಯು ಯುನೈಟೆಡ್ ಕಿಂಗ್ಡಮ್ (ಯುಕೆ) ಇತಿಹಾಸದಲ್ಲಿಯೇ ಅತಿದೊಡ್ಡ ನಗದು ದರೋಡೆ ಎಂದು ಪರಿಗಣಿಸಲಾಗಿದೆ. ಈ ಘಟನೆಯು ಇದೇ ದಿನ ಅಂದರೆ 2006 ರಲ್ಲಿ ಫೆಬ್ರವರಿ 22 ರಂದು ಸಂಭವಿಸಿದ್ದು, ಈ ರೀತಿಯ ಪ್ರಕರಣ ನಡೆಯುತ್ತೆ ಅನ್ನೋದಕ್ಕೆ ಸಾಕ್ಷಿಯಾಯಿತು.
ಅದು 2006 ಫೆ.22. ಇಂಗ್ಲೆಂಡ್ನ ಟನ್ಬ್ರಿಡ್ಜ್ನಲ್ಲಿ ನಡೆದ ಕಳ್ಳತನವು ಯುಕೆಯ ಅತಿದೊಡ್ಡ ದರೋಡೆ ಎಂದೇ ಪರಿಗಣಿಸಲ್ಪಟ್ಟಿತು. ಈ ಸಮಯದಲ್ಲಿ ಏಳು ಮಂದಿ ಕಳ್ಳರು ಸುಮಾರು 53 ಮಿಲಿಯನ್ ಪೌಂಡ್ (ಸುಮಾರು 700 ಕೋಟಿ ರೂ.) ಲೂಟಿ ಮಾಡಿದರು. ಆದರೆ ಅವರು 1600 ಕೋಟಿ ರೂಪಾಯಿಗಳನ್ನು ಅಲ್ಲಿಯೇ ಬಿಟ್ಟರು. ಇದಕ್ಕೆ ಕಾರಣ ಏನಿರಬಹುದೆಂದು ಹುಡುಕಲು ಹೊರಟಾಗ ಅದಕ್ಕೆ ಉತ್ತರ ಸಿಕ್ಕಿದೆ. ಹೌದು, ಇಷ್ಟು ದೊಡ್ಡ ಮೊತ್ತದ ಹಣವನ್ನು ಅಲ್ಲಿಯೇ ಬಿಡಲು ಕಾರಣವೆಂದರೆ ಅವರಿಗೆ ಅಷ್ಟು ಹಣವನ್ನು ಸಾಗಿಸಲು ಯಾವುದೇ ಮಾರ್ಗವಿರಲಿಲ್ಲ. ಆದ್ದರಿಂದ ದುರಾಸೆಗೆ ಬಲಿಯಾಗಿ ಸಿಕ್ಕಿಬೀಳುವ ಬದಲು ಕಳ್ಳರು ಕೈಗೆ ಬಂದಷ್ಟು ಹಣ ಹಿಡಿದುಕೊಂಡು ಹೋಗಲು ನಿರ್ಧರಿಸಿದ್ದಾರೆ.
ಖತರ್ನಾಕ್ ಕಳ್ಳರು ಟನ್ಬ್ರಿಡ್ಜ್ನಲ್ಲಿರುವ ಸೆಕ್ಯುರಿಟಾಸ್ ಡಿಪೋವನ್ನು ಗುರಿಯಾಗಿಸಿಕೊಂಡಿದ್ದರು. ಮೊದಲು ಮಾಹಿತಿ ಪಡೆಯಲು ಅವರಲ್ಲಿ ಒಬ್ಬರನ್ನು ಒಳಗೆ ಕಳುಹಿಸಿದರು. ಇದಾದ ನಂತರ ಅವರು ಮ್ಯಾನೇಜರ್ ಮತ್ತು ಅವರ ಕುಟುಂಬವನ್ನು ಅಪಹರಿಸಿದ್ದಾರೆ. ಆ ನಂತರ ಕಟ್ಟಡದೊಳಗೆ ನುಗ್ಗಿ 14 ಉದ್ಯೋಗಿಗಳನ್ನು ಬಂದೂಕು ತೋರಿಸಿ ಒತ್ತೆಯಾಳಾಗಿ ಇಟ್ಟುಕೊಂಡು 5 ಕೋಟಿ, 29 ಲಕ್ಷದ 96 ಸಾವಿರದ 760 ಪೌಂಡ್ (ಸುಮಾರು 700 ಕೋಟಿ ರೂ.) ಕದ್ದಿದ್ದರು. 1600 ಕೋಟಿ ಮೌಲ್ಯದ ನಗದನ್ನು ಕದಿಯುವ ಅವಕಾಶವೂ ಅವರಿಗೆ ಸಿಕ್ಕಿತ್ತು.ಆದರೆ ಅದು ಸಾಧ್ಯವಾಗಲಿಲ್ಲ.
ನಗದನ್ನು ಸಾಗಿಸುವ ಸಮಸ್ಯೆ ಕಂಡು ಕಳ್ಳರು ಉಳಿದ ಹಣವನ್ನು ಅಲ್ಲೇ ಇಡಲು ನಿರ್ಧರಿಸಿದ್ದಾರೆ. ನಂತರ ಪೊಲೀಸರು ತನಿಖೆ ಆರಂಭಿಸಿದಾಗ ವಿವಿಧೆಡೆ ಕಳ್ಳತನವಾದ ನಗದನ್ನು ವಶಪಡಿಸಿಕೊಂಡಿದ್ದಾರೆ. 2007ರವರೆಗೆ ಈ ಪ್ರಕರಣದಲ್ಲಿ 36 ಮಂದಿಯನ್ನು ಬಂಧಿಸಲಾಗಿತ್ತು.2007ರಲ್ಲಿ ಲಂಡನ್ನ ಓಲ್ಡ್ ಬೈಲಿಯಲ್ಲಿ ನಡೆದ ವಿಚಾರಣೆಯಲ್ಲಿ ಈ ಪ್ರಕರಣದಲ್ಲಿ 5 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು. ಅಪರಾಧಿಗಳ ಗುರುತನ್ನು ಮರೆಮಾಡಲು ಪ್ರಾಸ್ತೆಟಿಕ್ಸ್ ವಿನ್ಯಾಸಗೊಳಿಸಿದ ಮಹಿಳೆಯನ್ನು ಕಳ್ಳರ ವಿರುದ್ಧ ಸಾಕ್ಷ್ಯಕ್ಕಾಗಿ ಬಿಡುಗಡೆ ಮಾಡಲಾಯಿತು. ಅಂದಹಾಗೆ ಕಳುವಾದ ಮೊತ್ತದಲ್ಲಿ 265 ಕೋಟಿ ರೂಪಾಯಿ ನಗದು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.