ನ್ಯೂಸ್ ನಾಟೌಟ್ : ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ವಲಯದಲ್ಲಿ ಅಧಿಕಾರಕ್ಕಾಗಿ ಕಸರತ್ತುಗಳು ಮೆಲ್ಲಗೆ ಶುರುವಾಗಿವೆ. ಮಾತ್ರವಲ್ಲ ಪಕ್ಷದ ಕಾರ್ಯಕರ್ತರಿಂದಲೇ ಅಸಮಾಧಾನದ ಹೇಳಿಕೆಗಳು ಕೇಳಿ ಬಂದಿದ್ದು, ಇದೀಗ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿಯೇ ಇಂತಹ ಬೆಳವಣಿಗೆಗಳು ನಡೆಯುತ್ತಿದ್ದು ತೀವ್ರ ಕುತೂಹಲಕ್ಕೂ ಕಾರಣವಾಗಿದೆ.
ಇದೀಗ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿಯೂ (Udupi Chikkamagaluru Lok Sabha Constituency) ಬಿಜೆಪಿ ನಾಯಕರ ಟಿಕೆಟ್ ಪೈಪೋಟಿ ಜೋರಾಗಿದೆ. ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹಾಗೂ ಮಾಜಿ ಶಾಸಕ ಸಿಟಿ ರವಿ (CT Ravi) ಬಣಗಳ ನಡುವಣ ಸಂಘರ್ಷ ತಾರಕಕ್ಕೇರಿದ್ದು,ಈ ಮಧ್ಯೆ, ಬಿಜೆಪಿ ಕಾರ್ಯಕರ್ತರ ಒಂದು ಬಣದ ‘ಶೋಭಾ ಹಠಾವೋ ಬಿಜೆಪಿ ಬಚಾವೋ’ ಅಭಿಯಾನ ತೀವ್ರಗೊಂಡಿದೆ.
ಈ ಕುರಿತಂತೆ ಪಕ್ಷದ ಕಾರ್ಯಕರ್ತರು ಕೂಡ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹೈಕಮಾಂಡ್ ನಾಯಕರಿಗೆ ಪತ್ರ ಬರೆದು ಶೋಭಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಈಗಾಗ್ಲೇ ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಮುಂದುವರಿದ ಭಾಗವಾಗಿ ಇದೀಗ ‘ಹಠಾವೋ ಅಭಿಯಾನ’ ಆರಂಭಗೊಂಡಿದೆ. ಪತ್ರ ಅಭಿಯಾನ, ಗೋ ಬ್ಯಾಕ್ ಶೋಭಾ ಅಭಿಯಾನದ ಜೊತೆ ಬಿಜೆಪಿ ಬಚಾವೋ ಅಭಿಯಾನ ಆರಂಭಗೊಂಡಿದೆ.
ಕೆಲವೊಂದು ಕಾರಣಗಳು ಕಾರ್ಯಕರ್ತರ ಮುಂದಿದ್ದು, ತೀವ್ರ ಅಸಮಾಧಾನಕ್ಕೂ ಕಾರಣವಾಗಿವೆ. ಇಷ್ಟು ಸಮಯ ಅಂದ್ರೆ 3583 ದಿನಗಳಲ್ಲಿ 100 ದಿನವೂ ಕ್ಷೇತ್ರಕ್ಕೆ ಬಾರದ ಸಂಸದೆ ನಮಗೆ ಬೇಕೇ? ಕ್ಷೇತ್ರಕ್ಕೆ ಬಾರದ ಸಂಸದೆ ನಮಗೆ ಬೇಡವೇ ಬೇಡ ಎಂದು ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ಬಾರಿ ಸಿಟಿ ರವಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಕಡೆ ಶೋಭಾ ವಿರುದ್ಧ ಹಠಾವೋ ಅಭಿಯಾನ ನಡೆಯುತ್ತಿದ್ದು, ಮತ್ತೊಂದು ಕಡೆ ಸಿಟಿ ರವಿಗೆ ಟಿಕೆಟ್ ನೀಡುವಂತೆ ಪತ್ರ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ವಿದ್ಯಮಾನ ಬಿಜೆಪಿ ನಾಯಕರಿಗೆ ಇದೀಗ ತಲೆ ನೋವು ಉಂಟು ಮಾಡಿದೆ.
ಬಿಜೆಪಿಗೆ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟುತ್ತಿದೆ. ಪ್ರಧಾನಿ ಮೋದಿ ಪರ ಅಲೆ, ಒಲವು ಇದ್ದರೂ ಕ್ಷೇತ್ರದ ಸಂಸದರನ್ನು ಕಾರ್ಯಕರ್ತರು ಒಪ್ಪದ ಸ್ಥಿತಿ ಇದೆ. ಇನ್ನು ದಕ್ಷಿಣ ಕನ್ನಡದಲ್ಲಿಯೂ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಅನೇಕ ಕಾರ್ಯಕರ್ತರು ಅಸಮಾಧಾನ ತೋರ್ಪಡಿಸಿದ್ದಾರೆ.
ಅತ್ತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿಯೂ ಹಾಲಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಜನಾಕ್ರೋಶವಿದೆ. ಅಲ್ಲದೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಅನಂತಕುಮಾರ್ ಹೆಗಡೆ ಬಣ ಜಗಳವೂ ಆರಂಭವಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಇಂಥ ಬೆಳವಣಿಗೆಗಳು ಆಗುತ್ತಿರುವುದು ಬಿಜೆಪಿ ನಾಯಕತ್ವಕ್ಕೆ ಸವಾಲಾಗಿ ಪರಿಣಮಿಸಿದೆ.ಮುಂದೇನು ಆಗಲಿದೆಯೋ? ಇದಕ್ಕೆ ಹೈಕಮಾಂಡ್ ಏನು ಉತ್ತರ ನೀಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ.