ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ 6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಗಂಡನೊಬ್ಬ ಪತ್ನಿಯೆದುರು ಮಂಗಳಮುಖಿಯಾಗಿ ಪ್ರತ್ಯಕ್ಷವಾದ ಘಟನೆಯೊಂದು ವರದಿಯಾಗಿತ್ತು.ಇದೀಗ ನಾಪತ್ತೆಯಾದ ಮಗನೋರ್ವ 22 ವರ್ಷಗಳ ಬಳಿಕ ಸನ್ಯಾಸಿಯಾಗಿ ಪ್ರತ್ಯಕ್ಷವಾದ ಘಟನೆಯೊಂದು ವರದಿಯಾಗಿದೆ.
ಹೌದು, 11ನೇ ವಯಸ್ಸಿನಲ್ಲಿದ್ದಾಗ ಮಾರ್ಬಲ್ನಲ್ಲಿ ಆಡವಾಟಡುತ್ತಿದ್ದ ಮಗನ ಮೇಲೆ ಪೋಷಕರು ರೇಗಾಡಿದ್ದರು. ಕ್ಷುಲ್ಲಕ ಜಗಳಕ್ಕೆ ಮಗ ನಾಪತ್ತೆಯಾಗಿದ್ದ. ಪೊಲೀಸ್ ದೂರು ನೀಡಲಾಗಿತ್ತು, ಹುಡುಕಾಟ ನಡೆದಿದ್ದರೂ ಏನು ಪ್ರಯೋಜನವಾಗಿರಲಿಲ್ಲ. ಆದರೂ ಕಳೆದ 2 ದಶಕಗಳಿಂದ ಹುಡುಕಾಟ ನಿರಂತರವಾಗಿತ್ತು.ಮಗ ಇಲ್ಲದ ನೋವಿನಲ್ಲಿ ನಿತ್ಯ ಬದುಕು ಸಾಗಿಸಿದ್ದು, ಕೊನೆಗೆ ಮಗನೇನೋ ಬರೋಬ್ಬರಿ 22 ವರ್ಷಗಳ ಬಳಿಕ ಮರಳಿದ್ದಾನೆ. ಆದರೆ ಸನ್ಯಾಸಿಯಾಗಿ ಮರಳಿದ್ದಾನೆ. ಮಗನ ನೋಡಲು ಓಡೋಡಿ ಬಂದ ಪೋಷಕರಿಗೆ ಮಗನ ಮುದ್ದಾಡಲು ಸಾಧ್ಯವಾಗದೇ, ಸನ್ಯಾಸತ್ವ ಒಪ್ಪಿಕೊಳ್ಳಲು ಆಗದೇ ಕಣ್ಣೀರಿಟ್ಟ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.
ರತಿಪಾಲ್ ಸಿಂಗ್ ತನ್ನ ಕುಟುಂಬದ ಜೊತೆ ದೆಹಲಿಯಲ್ಲಿ ವಾಸವಿದ್ದಾರೆ. ಕೆಲಸ, ವ್ಯವಹಾರದ ಮೂಲಕ ಪತ್ನಿ, ಮಗ ಸೇರಿದ ಕುಟುಂಬ ಖುಷಿಯಾಗಿ ಸಾಗುತ್ತಿತ್ತು. 2002ರಲ್ಲಿ ಅಂದು ರತಿಪಾಲ್ ಸಿಂಗ್ ಹಾಗೂ ಭಾನುಮತಿ ಪುತ್ರ ಪಿಂಕು ಸಿಂಗ್ ಪೋಷಕರ ವಿರುದ್ದ ಆಕ್ರೋಶಗೊಂಡಿದ್ದ. ಮಾರ್ಬಲ್ನಲ್ಲಿ ಆಟವಾಡುತ್ತಿದ್ದ ಮಗ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದ.ಪಿಂಕು ಸಿಂಗ್ ಹುಡುಕಾಟಕ್ಕೆ ಎಲ್ಲಾ ಪ್ರಯತ್ನ ಮಾಡಿದ್ದರು.ಆದರೆ ಎಲ್ಲೂ ಸುಳಿವು ಇರಲಿಲ್ಲ. ಹೀಗೆ ಹುಡುಕಾಟದಲ್ಲಿ 2 ದಶಕಗಳೇ ಕಳೆದಿದೆ. ಮಗನ ನೆನಪಿನಲ್ಲೇ ಪೋಷಕರು ಬದುಕು ಸಾಗಿಸಿದ್ದಾರೆ.
ಹೀಗೆ ಒಂದು ದಿನ ದೆಹಲಿಯಲ್ಲಿರುವ ರತಿಪಾಲ್ ಹಾಗೂ ಭಾನುಮತಿಗೆ ತನ್ನ ಊರಾದ ಖರೌಲಿಯಿಂದ ಕರೆಯೊಂದು ಬಂದಿತ್ತು. ನಿಮ್ಮ ಮಗ ಮೂಲ ಮನೆಗೆ ಮರಳಿದ್ದಾನೆ. ತಕ್ಷಣವೇ ಬನ್ನಿ ಎಂಬ ಮಾಹಿತಿ ಆದಾಗಿತ್ತು. ಪೋಷಕರ ಸಂತಸಕ್ಕೆ ಪಾರವೇ ಇರಲಿಲ್ಲ. ದೆಹಲಿಯಿಂದ ಓಡೋಡಿ ಬಂದ ಪೋಷಕರಿಗೆ ಆಘಾತ ಕಾದಿತ್ತು.ಕಾರಣ ಮಗ ಸನ್ಯಾಸಿಯಾಗಿದ್ದ..!
ಸಂತಸದಲ್ಲಿ ಆಗಮಿಸಿದ ಪೋಷಕರಿಗೆ ಬರಸಿಡಿಲು ಬಡಿದಂತಾಯಿತು. ಮಗನನ್ನು ಅಪ್ಪಿಕೊಳ್ಳಲು, ಮುದ್ದಾಡಲು ಸಾಧ್ಯವಾಗಲಿಲ್ಲ. ತಾಯಿ ಮುಂದೆ ಸನ್ಯಾಸಿ ಭಿಕ್ಷೆಯ ಜಾನಪದ ಹಾಡು ಹೇಳಿದ್ದಾನೆ. ಇತ್ತ ತಾಯಿ ಹಾಗೂ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಾಯಿಯಿಂದ ಭಿಕ್ಷೆ ಪಡೆದು ಮರಳಿದ್ದಾನೆ. ಪೋಷಕರು, ಕುಟುಂಬಸ್ಥರು ಅದೆಷ್ಟೇ ಒತ್ತಾಯಿಸಿದರೂ ಮಗ ಮಾತ್ರ ಮನೆಯಲ್ಲಿ ಉಳಿಯುವ ನಿರ್ಧಾರವನ್ನು ಮಾಡಲೇ ಇಲ್ಲ.
ಇದೇ ವೇಳೆ ತನ್ನ ಪುತ್ರ ಸದ್ಯಕ್ಕೆ ಆಶ್ರಯ ಪಡೆದಿರುವ ಧಾರ್ಮಿಕ ಕೇಂದ್ರ 11 ಲಕ್ಷ ರೂಪಾಯಿಗೆ ಬೇಡಿಕೆ ಇಡುತ್ತಿದೆ. 11 ಲಕ್ಷ ರೂಪಾಯಿ ನೀಡಿದರೆ ಮಗನನ್ನು ಸನ್ಯಾಸತ್ವದಿಂದ ಮುಕ್ತಿಕೊಡಿಸುವುದಾಗಿ ಹೇಳಿದೆ ಎಂದಿದ್ದಾರೆ. ನನ್ನ ಬಳಿ ಅಷ್ಟು ಮೊತ್ತವಿಲ್ಲ, ನಾನು ಹೇಗೆ ಪಾವತಿ ಮಾಡಲಿ. ಪೊಲೀಸರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ನಮಗೆ ಪುತ್ರನ ಮರಳಿಸಿ ಎಂದು ತಂದೆ ರಿತಿಲಾಲ್ ಮನವಿ ಮಾಡಿದ್ದಾರೆ.