ನ್ಯೂಸ್ ನಾಟೌಟ್: ದೇವಸ್ಥಾನದ ಆದಾಯದ ವಿಚಾರವಾಗಿ ಆಢಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ಕಿತ್ತಾಟ ಜೋರಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ಬರಹವೊಂದು ವಿವಾದಕ್ಕೆ ಕಾರಣವಾಗಿದೆ.
ಬಸವನಬಾಗೇವಾಡಿ ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಹುಂಡಿ (ಕಾಣಿಕೆ ಪೆಟ್ಟಿಗೆ) ಮೇಲೆ ಅಧಿಕಾರಿಗಳು ಅಂಟಿಸಿರುವ ‘ಕಾಣಿಕೆ ಪೆಟ್ಟಿಗೆ ಸರಕಾರಕ್ಕೆ ಸೇರಿದ್ದು’ ಎಂಬ ಬರಹದ ಸ್ಟಿಕ್ಕರ್ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನದ ಹುಂಡಿಗೆ ಭಕ್ತರು ಕಾಣಿಕೆ ಹಾಕುವುದನ್ನು ಕಡಿಮೆ ಮಾಡಿ ಎಂಬ ಪ್ರಚಾರ ರಾಜ್ಯದಲ್ಲಿ ಜೋರಾದ ಬೆನ್ನಲ್ಲೇ ಇಲ್ಲಿನ ಅಧಿಕಾರಿಗಳು ಈ ಸ್ಟಿಕ್ಕರ್ ಅಂಟಿಸಿ ಚರ್ಚೆಗೆ ಕಾರಣವಾಗಿದೆ.
ಬಸವೇಶ್ವರ ದೇವಸ್ಥಾನಕ್ಕೆ ನಿತ್ಯವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುತ್ತಾರೆ. ಕಾಣಿಕೆ ಪೆಟ್ಟಿಗೆಗೆ ಕೈಲಾದಷ್ಟು ಹಣ ಹಾಕಿ ನಮಸ್ಕರಿಸುತ್ತಾರೆ. ಈಚೆಗೆ ಕಾಣಿಕೆ ಪೆಟ್ಟಿಗೆ ಒಡೆದಿದ್ದ ದೇವಸ್ಥಾನದ ಅಧಿಕಾರಿಗಳು ಒಟ್ಟು 8.53 ಲಕ್ಷ ರೂ. ಹಣ (2023, ಸೆಪ್ಟೆಂಬರ್ ತಿಂಗಳಿಂದ ಇಲ್ಲಿವರೆಗೆ) ವನ್ನು ಎಣಿಕೆ ಮಾಡಿದ್ದಾರೆ. ದಿಢೀರ್ ಸ್ಟಿಕ್ಕರ್ ಅಂಟಿಸಿದ ಬೆಳವಣಿಗೆ ಭಕ್ತರಲ್ಲೂ ಚರ್ಚೆಗೆ ಕಾರಣವಾಗಿದೆ.
”ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಹಣ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಆದರೂ ಹುಂಡಿ ಹಣ ಎಲ್ಲಿಗೆ ಹೋಗುತ್ತೆ? ಎಲ್ಲಿಟ್ಟಿದ್ದೀರಿ? ಎಂದೆಲ್ಲ ಭಕ್ತರು ಕೇಳುತ್ತಿದ್ದರು. ಈ ಕಾರಣದಿಂದಾಗಿ ಬಸವೇಶ್ವರ ದೇವಸ್ಥಾನದ ಕಾಣಿಕೆ ಪೆಟ್ಟಿಗೆ ಮೇಲೆ ಸ್ಟಿಕ್ಕರ್ ಅಂಟಿಸಲಾಗಿದೆ,” ಎಂದು ದೇವಸ್ಥಾನದಲ್ಲಿ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.