ನ್ಯೂಸ್ ನಾಟೌಟ್: ಇದೀಗ ಮೊಬೈಲ್ಗಳ ಅವಶ್ಯಕತೆ ತುಂಬಾ ಇದೆ.ಎತ್ತ ಹೋದರೂ ಕೂಡ ಮೊಬೈಲ್ ಇಲ್ಲದೇ ಒಂದು ಹೆಜ್ಜೆಯನ್ನು ಮುಂದೆ ಇಡೋದಕ್ಕೆ ಸಾಧ್ಯವಿಲ್ಲ.ಏನಾದರೂ ಅವಘಡಗಳು ಸಂಭವಿಸಿದಾಗಲೋ, ಟೈಮ್ ನೋಡೋದಕ್ಕೋ ಎಲ್ಲದಕ್ಕು ಮೊಬೈಲ್ ಬೇಕೆ ಬೇಕು..
ಇನ್ನು ಫೋನ್ ಸಂಪೂರ್ಣ ಹಾಳಾದರಂತು ಕೇಳೋದೇ ಬೇಡ , ಕಳೆದು ಹೋದರೆ ಅದರ ಮಾಲೀಕರ ಪಾಡು ಹೇಳತೀರದು. ಹಲವು ವರ್ಷಗಳ ಫೋಟೋಗಳು, ವಿಡಿಯೋ, ಸಂದೇಶಗಳು, ಮಹತ್ವದ ದಾಖಲೆಗಳು, ಫೋನ್ ಸಂಪರ್ಕಗಳು ಎಲ್ಲವನ್ನೂ ಕಳೆದುಕೊಂಡಾಗ ಜೀವವೇ ಹೋದಂತಾಗುತ್ತದೆ. ಇನ್ನು ಫೋನ್ ಕಳೆದುಕೊಂಡಾಗ ಅದು ನಿಮ್ಮ ಕೈಗೆ ವಾಪಸ್ ಸಿಗಬೇಕೆಂದರೆ ಪವಾಡವೇ ನಡೆಯಬೇಕು. ಪೊಲೀಸರಿಗೆ ದೂರು ನೀಡಿದರೂ ಅದರಿಂದ ಪ್ರಯೋಜನವಾಗಲಾರದು. ಹೀಗಾಗಿ ಹೆಚ್ಚಿನವರು ಫೋನ್ ಹುಡುಕುವ ಉಸಾಬರಿಗೆ ಹೋಗದೆ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ, ಹೊಸ ಫೋನ್ ಖರೀದಿಸುತ್ತಾರೆ. ಆದರೆ ತಮಿಳುನಾಡಿನ ವ್ಯಕ್ತಿಯೊಬ್ಬರ ‘ಪತ್ತೇದಾರಿ’ ಚಾಣಾಕ್ಷತೆಯು ಅವರ ಅಪ್ಪನ ಕಳೆದು ಹೋದ ಫೋನ್ ಅನ್ನು ಪತ್ತೆ ಮಾಡುವಲ್ಲಿ ಸಹಾಯ ಮಾಡಿದೆ.ತಂತ್ರಜ್ಞಾನ ಬಳಸಿ ಪೊಲೀಸರು ಮಾತ್ರವಲ್ಲ, ಜನ ಸಾಮಾನ್ಯರೂ ಕಳ್ಳರನ್ನು ಹಿಡಿಯಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ರೈಲಿನಲ್ಲಿ ಕಳುವಾಗಿದ್ದ ತಮ್ಮ ತಂದೆಯ ಫೋನ್ ಮತ್ತು ಚೀಲವನ್ನು ಗೂಗಲ್ ಮ್ಯಾಪ್ನ ಲೊಕೇಷನ್ ಹಂಚಿಕೊಳ್ಳುವ ಫೀಚರ್ ಬಳಸಿಕೊಂಡು ಹುಡುಕಿ ಮರಳಿ ಪಡೆದುಕೊಂಡ ತಮಿಳುನಾಡಿನ ರಾಜ್ ಭಗತ್ ಪಿ ಎಂಬ ವ್ಯಕ್ತಿಯ ಸಾಹಸಗಾಥೆ ಇದು. ವೃತ್ತಿಪರ ಡೇಟಾ ಮ್ಯಾಪರ್ ಆಗಿರುವ ರಾಜ್ ಅವರು ತಮ್ಮ ತಾಂತ್ರಿಕ ಜ್ಞಾನ ಬಳಸಿಕೊಂಡಿದ್ದಾರೆ.
ರಾಜ್ ಅವರ ತಂದೆ ನಾಗರಕೋಯಿಲ್ನಿಂದ ತಿರುಚಿಗೆ ನಾಗರಕೋಯಿಲ್ ಕಾಚಿಗುಡ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಭಾರಿ ಜನದಟ್ಟಣೆಯ ಲಾಭ ಪಡೆದ ಕಳ್ಳ ಅವರ ಬಳಿ ಇದ್ದ ಬ್ಯಾಗ್ ಕದ್ದು ತಿರುನೆಲ್ವೇಲಿ ಜಂಕ್ಷನ್ನಲ್ಲಿ ಇಳಿದು ಪರಾರಿಯಾಗಿದ್ದ. ಬೇರೆಯವರಾದರೆ ಪೊಲೀಸರಿಗೆ ದೂರು ನೀಡಿ, ಕಳ್ಳ ಸಿಗಬಹುದೇನೋ ಎಂದು ಕಾಯುತ್ತಿದ್ದರು. ಆದರೆ ರಾಜ್ ಅದನ್ನ ಕಂಡು ಹಿಡಿದಿದ್ದಾರೆ.
ತಮ್ಮ ಸಂಪೂರ್ಣ ಸಾಹಸದ ಸಿನಿಮೀಯ ಕಥೆಯನ್ನು ರಾಜ್ ವಿವರಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ನೀವು ಪತ್ತೇದಾರಿ ಶೆರ್ಲಾಕ್ ಹೋಮ್ಸ್ನಂತೆ ಸಾಹಸ ಮಾಡಿದ್ದೀರಿ ಎಂದು ಕೆಲವರು ಪ್ರಶಂಸಿಸಿದ್ದಾರೆ. ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ತಾವು ಈ ಹಿಂದೆ ಕೆಲಸ ಮಾಡಿದ್ದಾಗಿ ಟೆಕ್ಕಿ ರಾಜ್ ಭಗತ್ ತಿಳಿಸಿದ್ದಾರೆ. ಸಿನಿಮಾದಲ್ಲಿ ಚೋಳ ಸಾಮ್ರಾಜ್ಯದ ವ್ಯಾಪ್ತಿಯನ್ನು ತೋರಿಸುವಾಗ ರಾಜ್ ಅವರು ಮ್ಯಾಪಿಂಗ್ ಪರಿಣತಿಯನ್ನು ಬಳಸಲಾಗಿದೆಯಂತೆ.