ನ್ಯೂಸ್ ನಾಟೌಟ್ : ಅಮ್ಮನನ್ನು ಕಣ್ಣಿಗೆ ಕಾಣೋ ದೇವರು ಎಂದು ಕರಿತಾರೆ.ತಾಯಿ ಮಹತ್ವ ಅವರಿದ್ದಾಗ ಅಷ್ಟೊಂದು ಗೊತ್ತಾಗಲ್ಲ.ಆದರೆ ಅವರು ನಮ್ಮ ಜತೆ ಒಂದು ದಿನ ಇಲ್ಲ ಅಂದಾಗ ಅವರ ಬೆಲೆ ಏನು ಅನ್ನೋದು ಕಂಪ್ಲೀಟ್ ಅರಿವಿಗೆ ಬರುತ್ತೆ.ಕೆಲವೊಂದು ಸಲ..ಜೀವನ ಅನ್ನುವಂಥದ್ದು ನಾವಂದುಕೊಂಡ ಹಾಗೆ ಇರೋದಿಲ್ಲ.ನಾವು ಹೀಗೆಯೇ ಇರಬೇಕು ಎಂದು ಯೋಚನೆ ಮಾಡುವಷ್ಟರಲ್ಲಿ ಅದು ಇನ್ನೆನೋ ಆಗಿ ಬಿಡುತ್ತದೆ.ಅಂತಹುದೇ ಒಂದು ಘಟನೆ ಇಲ್ಲೊಂದು ಕಡೆ ವರದಿಯಾಗಿದೆ.
ಹೌದು, ಬರೋಬ್ಬರಿ 32 ವರ್ಷಗಳ ಬಳಿಕ ತನ್ನ ಕುಟುಂಬದ ಹುಡುಕಾಟದಲ್ಲಿ ಸ್ವೀಡನ್ ನಿಂದ ಯುವತಿಯೊಬ್ಬಳು ತಾಯ್ನಾಡಾದ ಮೈಸೂರಿಗೆ ಮರಳಿದ್ದಾಳೆ.ಸ್ವೀಡನ್ ನಿವಾಸಿ ಜಾಲಿ ಸ್ಯಾಂಡ್ ಬರ್ಗ್ ತನ್ನ ಮೂಲ ಹುಡುಕಿಕೊಂಡು ಮೈಸೂರಿಗೆ ಮರಳಿರುವ ಮಹಿಳೆ. ಜಾಲಿ ಸ್ಯಾಂಡ್ ಬರ್ಗ್ ಅವರನ್ನು ಎಂಟು ವರ್ಷದ ಬಾಲಕಿಯಾಗಿದ್ದಾಗ 1989 ರಲ್ಲಿ ಬೆಂಗಳೂರಿನ ಆಶ್ರಯ ಚಿಲ್ಡ್ರನ್ ಹೋಂ ನಿಂದ ಆಸ್ಟ್ರಿಯಾದ ಕುಟುಂಬವೊಂದು ದತ್ತು ಪಡೆದುಕೊಂಡಿತ್ತು. ಅನಾಥವಾಗಿದ್ದ ಜಾಲಿ ಸ್ಯಾಂಡ್ ಬರ್ಗ್ ಗೆ ಆಗ ಒಂದು ಕುಟುಂಬ ಸಿಕ್ಕಿತ್ತು. ಅಲ್ಲಿಯೇ ಬೆಳೆದು ದೊಡ್ಡವರಾದ ಅವರು ಇದೀಗ ತಮ್ಮ ಮೂಲ ಕುಟುಂಬದ ಹುಡುಕಾಟದಲ್ಲಿದ್ದಾರೆ.
ಜಾಲಿ ಸ್ಯಾಂಡ್ಬರ್ಗ್ ಮೂಲತಃ ಮೈಸೂರು ಜಿಲ್ಲೆಯ ಒಂದು ಕುಟುಂಬದಲ್ಲಿ 1985 ರಲ್ಲಿ ಜನಿಸಿದ್ದಾರೆ. ತಾಯಿ ಮಂಡ್ಯ ಬಳಿಯ ಮದ್ದೂರಿನವರು ಎಂದು ತಿಳಿದು ಬಂದಿದೆ.ಅವರು ಮೈಸೂರಿನ ವ್ಯಕ್ತಿಯೋರ್ವರನ್ನು ವಿವಾಹವಾಗಿದ್ದರು. ಈಗ ಮದ್ದೂರಿನ ಮೂಲವನ್ನು ಹುಡುಕಿ ಹೊರಟಾಗ ತನ್ನ ಮದ್ದೂರಿನ ಪ್ರೌಢಶಾಲೆ ಪಕ್ಕದ ಮನೆಯಲ್ಲಿದ್ದ ಜಯಮ್ಮ ಎಂಬವವರು ಜಾಲಿ ಅವರನ್ನು ಸಂಸ್ಥೆಗೆ ನೀಡಿದ್ದರೆಂಬುದು ತಿಳಿದು ಬಂದಿದೆ. ಆದರೆ ಆಕೆಗೆ ತನ್ನನ್ನು ನೀಡಿದವರು ಯಾರು ಎಂಬುದನ್ನು ತಿಳಿಯಲು ಹೋದರೆ ಆಕೆ ಈ ಹಿಂದೆಯೇ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಇಷ್ಟಾದರೂ ಅವರ ಹುಡುಕಾಟ ಅಲ್ಲಿಗೆ ನಿಲ್ಲಲಿಲ್ಲ.ಮತ್ತೆ ಮುಂದುವರಿದು ಹುಡುಕಾಡಲು ಆರಂಭಿಸಿದ್ದಾರೆ.ಜಾಲಿ ಅವರ ತಾಯಿಯ ಹೆಸರು ವಸಂತಮ್ಮ ಎಂದು ಗೊತ್ತಾಗಿದೆ. ತಂದೆ ಜೀವನ ಕತ್ತಲು ಮಾಡಿಕೊಂಡ ಕಾರಣ ಆಕೆ ಕಷ್ಟದ ಜೀವನ ಸಾಗಿಸುತ್ತಿದ್ದರು. ಹೀಗಾಗಿ ತನ್ನ ಅಜ್ಜಿ ಪರಿಚಿತರಾದ ಜಯಮ್ಮ ಎಂಬುವವರಿಗೆ ತನ್ನನ್ನು ನೀಡಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಆಕೆ ತನ್ನನ್ನು ಬೆಂಗಳೂರಿನ ಮೇರಿ ಕಾನ್ವೆಂಟ್ಗೆ ಕರೆತಂದಾಗ ಅಲ್ಲಿಂದ ಆಶ್ರಯ ಚಿಲ್ಡ್ರನ್ ಹೋಂಗೆ ಸ್ಥಳಾಂತರಿಸಲಾಯಿತು ಎಂಬ ಮಾಹಿತಿ ದೊರೆತಿದೆ. ಈಗ ತನಗೆ ತಿಳಿದ ಯಾರೂ ಸಹ ಬದುಕಿಲ್ಲ ಎನ್ನುವುದು ದೃಢವಾಗಿದೆ.
ಸದ್ಯ ತನಗೆ ಸಹೋದರರು, ಸಹೋದರಿಯರು ಇರಬಹುದೇ ಎಂದು ಹುಡುಕಾಡುತ್ತಿದ್ದಾರೆ ಜಾಲಿ ಸ್ಯಾಂಡ್ ಬರ್ಗ್. ಅವರನ್ನ ಹುಡುಕಿಕೊಂಡು ಮೈಸೂರಿಗೆ ಬಂದಿದ್ದಾರೆ. ತನ್ನ ಕುಟುಂಬಸ್ಥರನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾರೆ. ಇದಕ್ಕೆ ಅವರ ಪತಿ ಸಹ ಸಹಕಾರ ನೀಡುತ್ತಿದ್ದು,ಆದಷ್ಟು ಬೇಗ ಇವರ ಕನಸು ನೆರವೇರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.