ನ್ಯೂಸ್ ನಾಟೌಟ್:ರಬ್ಬರ್ ಟ್ಯಾಪಿಂಗ್ ಮಾಡಲು ತೋಟಕ್ಕೆ ಹೋಗಿದ್ದ ಮಹಿಳೆಗೆ ಕಾಡುಹಂದಿಯೊಂದು ತಿವಿದು ಕಚ್ಚಿದ್ದು, ಇದರ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯದಿಂದ ವರದಿಯಾಗಿದೆ.
ಸುಳ್ಯ ತಾಲೂಕು ದುಗಲಡ್ಕ ಕೂಟೇಲು ನಿವಾಸಿ ಪದ್ಮಾವತಿ ಎಂಬವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು . ಹೀಗಾಗಿ ಎಂದಿನಂತೆ ಇಂದು ಕೂಡ ಅವರು ( ಫೆ. 22 ರಂದು) ಮುಂಜಾನೆ ದುಗಲಡ್ಕ ಘಟಕದ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದರು. ಈ ವೇಳೆ ಪೊದೆಯಲ್ಲಿದ್ದ ಕಾಡುಹಂದಿ ಏಕಾಏಕಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.
ಘಟನೆಯಿಂದ ಬೆಚ್ಚಿ ಬಿದ್ದ ಮಹಿಳೆ ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಕೂಡ ಓಡಿದ ಮಹಿಳೆಯನ್ನೇ ಬೆನ್ನಟ್ಟಿದೆ.ಹೀಗೆ ಓಡುವ ರಭಸದಲ್ಲಿ ಜಾರಿ ಬಿದ್ದಿದ್ದು ಕಾಡು ಹಂದಿ ಅವರನ್ನು ಬೆನ್ನು ಮತ್ತಿತರೆಡೆಗೆ ಕಚ್ಚಿ ತೀವ್ರ ಗಾಯಗೊಳಿಸಿತೆಂದು ತಿಳಿದುಬಂದಿದೆ. ವಿಷಯ ತಿಳಿದ ಇತರ ಟ್ಯಾಪರ್ಗಳು ಕೆ.ಎಫ್.ಡಿ.ಸಿ. ಅಧಿಕಾರಿಗಳಿಗೆ ತಿಳಿಸಿದ ಕೂಡಲೇ ಅವರು ವಾಹನ ತಂದು, ನಿಗಮದ ಸಿಬ್ಬಂದಿ ಮತ್ತು ಊರವರು, ಬಂಧುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
ರಬ್ಬರ್ ತೋಟದಲ್ಲಿರುವ ಪೊದರು ಕಾಡನ್ನು ಕಡಿಯುವ ವ್ಯವಸ್ಥೆ ಮಾಡದಿರುವುದರಿಂದ ಕಾಡುಹಂದಿ ಗಿಡಗಂಟಿಗಳ ಮಧ್ಯೆ ಕುಳಿತಿತ್ತೆಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿಲಾಗುತ್ತಿದೆ.