ನ್ಯೂಸ್ ನಾಟೌಟ್ : ವಿದ್ಯುತ್ ಯಂತ್ರಗಳನ್ನು ಬಳಸುವಾಗ ಎಷ್ಟು ಎಚ್ಚರಿಕೆಯಲ್ಲಿರಬೇಕು ಅನ್ನುವಂಥರ ಬಗ್ಗೆ ನೀವು ಈ ಹಿಂದೆಯೇ ಸಾಕಷ್ಟು ವರದಿಯನ್ನು ಓದಿರ ಬಹುದು. ಇಸ್ತ್ರಿ ಪೆಟ್ಟಿಗೆಯಲ್ಲಿ ಬೆಂಕಿ ,ಇನ್ವರ್ಟರ್ ಸೇರಿದಂತೆ ಕೆಲವೊಮ್ಮೆ ಎಲೆಕ್ಟ್ರಿಕ್ ಸ್ಕೂಟಿಗಳು ಕೂಡ ಹೊತ್ತಿ ಉರಿದಿರುವ ಘಟನೆ ಬಗ್ಗೆ ವರದಿಯಾಗಿವೆ.ಆದರೆ ಇದೀಗ ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ಸಂದರ್ಭ ಗ್ರೈಂಡರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಗ್ರೈಂಡರ್ ಸಂಪೂರ್ಣ ಭಸ್ಮವಾಗಿರುವ ಘಟನೆ ಬಗ್ಗೆ ಸುಳ್ಯದಿಂದ ವರದಿಯಾಗಿದೆ.
ಸುಳ್ಯದ ಹಳೆಗೇಟು ರಂಗಮನೆ ಸಮೀಪ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದೆ.ಗ್ರೈಂಡರ್ನಲ್ಲಿ ಅಕ್ಕಿ ರುಬ್ಬುತ್ತಿದ್ದ ಸಂದರ್ಭ ಗ್ರೈಂಡರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಗ್ರೈಂಡರ್ ಸಂಪೂರ್ಣ ಭಸ್ಮವಾಗಿದೆ.ಗುಂಡಿಯಡ್ಕ ಜಿ.ಸಾಧಿಕ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು,ಮನೆಯವರು ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬಲು ಹಾಕಿ ಮತ್ತೊಂದು ಕೋಣೆಯಲ್ಲಿ ಮನೆ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ವಯರ್ ಸುಟ್ಟುಹೋದ ವಾಸನೆ ಬರೋದಕ್ಕೆ ಆರಂಭವಾಗಿದೆ.ಈ ಸಂದರ್ಭ ಮನೆಯವರು ಅಡುಗೆ ಕೋಣೆಗೆ ಹೋಗಿ ನೋಡಿದಾಗ ಗ್ರೈಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೆಲವೇ ನಿಮಿಷಗಳಲ್ಲಿಯೇ ಬೆಂಕಿ ವ್ಯಾಪ್ತಿ ಜಾಸ್ತಿಯಾಗತೊಡಗಿತು.ಅಡುಗೆ ಕೋಣೆಯಲ್ಲಿ ಸಂಪೂರ್ಣ ಆವರಿಸಿಕೊಂಡಿದೆ.
ಗಾಬರಿಯಾದ ಮನೆಯವರು ಮೈನ್ ಸ್ವಿಚ್ ಆಫ್ ಮಾಡಿದ್ದಾರೆ.ಗ್ರೈಂಡರ್ ಪಕ್ಕದಲ್ಲಿದ್ದ ಗ್ಯಾಸ್ ಸಿಲಿಂಡರನ್ನು ಮನೆಯ ಹೊರಗೆ ತಂದಿದ್ದು, ದೊಡ್ಡ ಅನಾಹುತ ತಪ್ಪಿದಂತಾಯಿತು.ಒಟ್ಟಿನಲ್ಲಿ ಕಳೆದ ಐದು ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ ಗ್ರೈಂಡರ್ ಈ ರೀತಿ ಹೊತ್ತಿ ಉರಿದಿರುವುದಕ್ಕೆ ಮನೆಯವರು ಕಳವಳಗೊಂಡಿದ್ದಾರೆ.ಜತೆಗೆ ಈ ಘಟನೆ ಎಲ್ಲರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.