ನ್ಯೂಸ್ ನಾಟೌಟ್ : ಕೋಳಿ ಮರಿಯೆಂದು ನುಂಗಲು ಹೊರಟ ಹಾವೊಂದು ತಪ್ಪಿ ವಿಷದ ಬಾಟಲಿಯನ್ನು ನುಂಗಿ ಪರದಾಡಿದ ಘಟನೆಯೊಂದು ದ.ಕ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ವರದಿಯಾಗಿದೆ.ಮನೆಯ ಹಟ್ಟಿಗೆ ಹೊಕ್ಕ ಹಾವು ಅಲ್ಲೇ ಸಮೀಪದಲ್ಲಿದ್ದ ಕೋಳಿಯ ಮರಿಯನ್ನು ನುಂಗಲು ಪ್ರಯತ್ನಿಸಿತು.
ನೀರೆ ಗ್ರಾಮದ ಸುಮಿತ್ ಪೂಜಾರಿ ಎಂಬುವವರ ಮನೆಯ ಶೌಚಾಲಯದಲ್ಲಿ ವಿಷದ ಬಾಟಲಿಯನ್ನು ಹಾವು ನುಂಗಿದ್ದು, ಇದನ್ನು ಕಂಡ ಜಗದೀಶ್ ಎಂಬುವರು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಅದರಂತೆ ಗುರುರಾಜ್ ಸನಿಲ್ ಅವರು ಗೆಳೆಯರೊಂದಿಗೆ ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ವಿಷದ ಬಾಟಲ್ ಹೊರ ತೆಗೆದು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆಗೆ ಸ್ಥಳೀಯರು, ಉರಗ ತಜ್ಞರು ಹರಸಾಹಸ ಪಟ್ಟಿದ್ದಾರೆ.
ಸ್ಥಳೀಯ ಜಗದೀಶ್ ಹಾಗೂ ಅವರ ಗೆಳೆಯ ಸುಜಿತ್ ಎಂಬುವರು ಹಾವು ಅವಿತಿದ್ದ ಶೌಚಾಲಯದ ನೆಲವನ್ನು ಪೂರ್ಣ ಒಡೆದು ಕೊನೆಗೆ ಅದರ ಅಡಿಪಾಯದ ಕಲ್ಲುಗಳನ್ನು ಕಿತ್ತು ತೆಗೆದು ಸಹಕರಿಸಿದಾಗ ಗುರುರಾಜ್ ಸನಿಲ್ ಅವರು ಹಾವನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಹಿಡಿದು ಪೂರ್ತಿ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ತಳ್ಳುತ್ತಾ ಹೊರ ತೆಗೆದಿದ್ದಾರೆ. ಬಾಟಲಿಯನ್ನು ಹೊರ ತೆಗೆದು ಸುರಕ್ಷಿತವಾಗಿ ಹಾವನ್ನು ನೀರೆ ಬೈಲೂರು ಸಮೀಪ ಕಾಡಿಗೆ ಬಿಡಲಾಗಿದೆ.