ನ್ಯೂಸ್ ನಾಟೌಟ್ : ಕಾಂತಾರ ಚಿತ್ರ ಯಶಸ್ಸಿನ ಬಳಿಕ ಸಿನಿಮಾಗಳಲ್ಲಿ ದೈವರಾಧನೆ ಪ್ರದರ್ಶನ ಹೆಚ್ಚುತ್ತಿದೆ.ಮಾತ್ರವಲ್ಲ ಕೆಲವರು ರೀಲ್ಸ್ಗಳಲ್ಲಿಯೂ ಇದನ್ನು ಪ್ರದರ್ಶನ ಮಾಡತೊಡಗಿದ್ರು. ಮೊನ್ನೆಯಷ್ಟೇ ಇದು ಟಿವಿ ಧಾರಾವಾಹಿಗಳಿಗೂ ವ್ಯಾಪಿಸಿದ ಘಟನೆ ಬಗ್ಗೆ ವರದಿಯಾಗಿತ್ತು.ಇದೀಗ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಇನ್ಮುಂದೆ ದೈವಾರಾಧನೆ ಪ್ರದರ್ಶನವಾಗದಂತೆ ದೈವಾರಾಧಕರ ಸಂಘಟನೆ ಹೋರಾಟಕ್ಕೆ ಮುಂದಾಗಿದೆ. ಮಾತ್ರವಲ್ಲ ಬಜರಂಗದಳ, ವಿಶ್ವಹಿಂದು ಪರಿಷತ್ ಸಹ ಹೋರಾಟಕ್ಕೆ ಸಾಥ್ ನೀಡಿದೆ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ನೀಡಿರುವ ದೈವಾರಾಧಕರು, ದೈವ ಕೋಲ ಪ್ರದರ್ಶನ ಮಾಡಿದ ಖಾಸಗಿ ವಾಹಿನಿಯ ನಿರ್ದೇಶಕನಿಗೂ ತರಾಟೆ ತೆಗೆದುಕೊಂಡಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಮುಂದೆ ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನ ಮಾಡದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.. ಒಂದು ವೇಳೆ ಸಿನಿಮಾಗಳಲ್ಲಾಗಲಿ, ಧಾರಾವಾಹಿಗಳಲ್ಲಾಗಲಿ ದೈವಾರಾಧನೆ ಪ್ರದರ್ಶನ ಕಂಡುಬಂದಲ್ಲಿ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ದೈವಾರಾಧಕರು.
ಇಷ್ಟು ದಿನ ದೈವರಾಧನೆಗೆ ಅಪಮಾನ ಮಾಡಲಾಗುತ್ತಿತ್ತು.ಆದರೆ ಈ ಬಾರಿ ನಾವು ಸುಮ್ನಿರೋದಿಲ್ಲ. ಈ ಹಿನ್ನೆಲೆ ದೈವದ ಅಪಮಾನ ಮಾಡುವವರ ವಿರುದ್ಧ ಹೋರಾಟಕ್ಕೆ ವಿಶ್ವಹಿಂದು ಪರಿಷತ್, ಬಜರಂಗದಳ ದೈವಾರಾಧಕರ ಸಂಘಟನೆಗೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಬಜರಂಗದಳ ಮುಖಂಡ ಶರಣ್ ಪಂಪ್ವೆಲ್,’ಯಾವುದೇ ಕಾರಣಕ್ಕೂ ದೈವಾರಾಧನೆ ದೃಶ್ಯಗಳನ್ನೊಳಗೊಂಡ ಧಾರವಾಹಿ ತೆರೆ ಮೇಲೆ ಬರಬಾರದು ಪ್ರದರ್ಶನವಾದರೆ ಬೆಂಗಳೂರಿಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ. ದರ್ಶನವಾದ್ರೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಮುಂದಿನ ತಮ್ಮ ಸಿನಿಮಾಗಳಲ್ಲಿ ದೈವರಾಧನೆ ಪ್ರದರ್ಶಿಸದಂತೆ’ ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡಿದ್ದೇವೆ ಎಂದಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ’ಕಾವೇರಿ ಕನ್ನಡ ಮೀಡಿಯಂ’ ಧಾರವಾಹಿ ಪ್ರೊಮೊದಲ್ಲಿ ದೈವಾರಾಧನೆಯ ಬಳಕೆ ಮಾಡಿತ್ತು ವಿಡಿಯೋ ವೈರಲ್ ಆಗಿ ಎಲ್ಲೆಡೆ ತುಳುನಾಡು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗಾಗಲೇ ಪ್ರೊಮೊದಲ್ಲಿ ಬಿಡುಗಡೆಯಾಗಿದ್ದು, ಸೀರಿಯಲ್ನಲ್ಲಿ ಬಿಡುಗಡೆಯಾದ್ರೆ ಬೆಂಗಳೂರಿಗೆ ಬಂದು ಮುತ್ತಿಗೆ ಹಾಕುತ್ತೇವೆ ಎಂದು ತುಳುನಾಡಿಗರು ಎಚ್ಚರಿಕೆ ನೀಡಿ ಠಾಣೆ ಮೆಟ್ಟಿಲೇರಿದ್ದಾರೆ.