ನ್ಯೂಸ್ ನಾಟೌಟ್: ಸರ್ಕಾರ ಅಕ್ರಮ ಮರಳುಗಾರಿಕೆಯನ್ನು ತಡೆಯುವುದಕ್ಕೆ ಸಾಕಷ್ಟು ಕ್ರಮ ತೆಗೆದುಕೊಂಡಿದ್ದರೂ ಅಕ್ರಮ ಚಟುವಟಿಕೆಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಹಗಲೆಲ್ಲ ಸುಮ್ಮನಿರುವ ಅಕ್ರಮ ಮರಳು ಸಾಗಾಟದಾರರು ಕತ್ತಲಾಗುತ್ತಿದ್ದಂತೆ ಸದ್ದಿಲ್ಲದೆ ಕಾರ್ಯಪ್ರವೃತ್ತರಾಗುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಬಳಿಯ ವೈಎಂಕೆ ಬಳಿ ಪ್ರತಿ ನಿತ್ಯ ತಡರಾತ್ರಿ 12 ಗಂಟೆಯಿಂದ ಬೆಳ್ ಬೆಳಗ್ಗೆ 5 ಗಂಟೆವರೆಗೆ ಅಪರಿಚಿತರು ವಿದ್ಯುತ್ ಲೈನ್ ಅನ್ನು ಸ್ಥಗಿತಗೊಳಿಸುತ್ತಿದ್ದಾರೆ. ಈ ಬಗ್ಗೆ ಕೆಲವು ದಿನಗಳಿಂದ ಅನುಮಾನಗಳು ಹೆಚ್ಚುತ್ತಿದ್ದರೂ ಇದೀಗ ಸುತ್ತಮುತ್ತಲಿನ ಜನರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸಿಸಿಟಿವಿಯಲ್ಲಿಯೂ ಗೋಚರಿಸದಂತೆ ಕಳ್ಳರು ತಮ್ಮ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.
ಅರಂತೋಡು ಭಾಗದಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇತ್ತೀಚಿನ ಕೆಲವು ಸಮಯದಿಂದ ಪ್ರತಿ ನಿತ್ಯ ವಿದ್ಯುತ್ ಲೈನ್ ಆಫ್ ಆಗುತ್ತಿರುವುದರಿಂದ ಅರಂತೋಡು , ಗೂನಡ್ಕ ಸೇರಿದಂತೆ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳುತ್ತಿದೆ. ಇದನ್ನು ಮೆಸ್ಕಾಂನವರು ಕೂಡ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಕ್ರಮ ಮರಳು ಸಂಪಾಜೆ ಮೂಲಕವಾಗಿ ಕೊಡಗು ಭಾಗಕ್ಕೆ ಹೋಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಅನುಮಾನಗೊಂಡು ಸ್ಥಳೀಯರನ್ನು ಪ್ರಶ್ನಿಸಿದಾಗ , ‘ಕತ್ತಲೆಗೂ ಪೊಯ್ಯ ಪೊಪುಂಡು, ಐಕ್ ಆಫ್ ಆಪುಂಡು’ ಅಂತ ಹೇಳುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಗಣಿ ಇಲಾಖೆ ದಿವ್ಯ ಮೌನವನ್ನು ವಹಿಸಿರುವುದೇ ಇಂತಹ ಅಕ್ರಮ ಚಟುವಟಿಕೆ ರಾಜಾರೋಷವಾಗಿ ನಡೆಯಲು ಕಾರಣವಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಅಕ್ರಮ ಮರಳುಗಾರಿಕೆಯನ್ನು ನಡೆಸುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ. ಈ ಮೂಲಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಿದೆ.