ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸುಳ್ಯ ತಾಲೂಕಿನ ಪರಿಸರದ ಸುತ್ತಮುತ್ತ ಕಳ್ಳತನ ಪ್ರಕರಣಗಳು ಇನ್ನೂ ಹಸಿಯಾಗಿರುವಾಗಲೇ ಇದೀಗ ಕೊಡಗು ಸಂಪಾಜೆಯ ಬಳಿ ಅಂತಹುದೇ ಮತ್ತೊಂದು ಪ್ರಕರಣ ವರದಿಯಾಗಿದೆ. ಹಾಡಹಗಲೇ ಮನೆಯ ಬೀಗ ಮುರಿದು ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದ್ದು ಮಹತ್ವದ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಸ್ಥಳೀಯರ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.
ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಯಾರಿರುತ್ತಾರೆ, ಶ್ವಾನಗಳಿವೆಯೇ, ಎಷ್ಟು ಹೊತ್ತಿಗೆ ಮನೆಯಿಂದ ಹೊರಡುತ್ತಾರೆ, ವಾಪಸ್ ಯಾವಾಗ ಮನೆಗೆ ಬರುತ್ತಾರೆ ಅನ್ನುವ ಮಾಹಿತಿಯನ್ನ ಸರಿಯಾಗಿ ತಿಳಿದುಕೊಂಡವರೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮನೆ ಮಾಲೀಕ ವೃತ್ತಿಯಲ್ಲಿ ಟೈಲರ್ ಆಗಿದ್ದು ಕೊಡಗು ಸಂಪಾಜೆಯ ಬೈಲಿನ ವಿಜಯ್ ಕುಮಾರ್ ಅವರು ತಮ್ಮ ಪತ್ನಿಯೊಂದಿಗೆ ಎಂದಿನಂತೆ ಪೆ.8ರಂದು ಕೂಡ ಟೈಲರ್ ಶಾಪ್ ಗೆ ಬಂದಿದ್ದಾರೆ.
ಬೆಳಗ್ಗಿನಿಂದ ಸಂಜೆ ತನಕ ದುಡಿದು ಮನೆಗೆ ವಾಪಸ್ ಹೋಗುವ ಸಂದರ್ಭದಲ್ಲಿ ಕಳ್ಳತನ ಪ್ರಕರಣ ಮನೆಯವರ ಅರಿವಿಗೆ ಬಂದಿದೆ. ಮನೆಯ ಹಿಂಬದಿಯಲ್ಲಿ ವಿಜಯ್ ಕುಮಾರ್ ಅವರು ಶ್ವಾನ ಸಾಕಿದ್ದಾರೆ. ಆ ಶ್ವಾನಗಳು ಮನೆಯ ಹಿಂಬದಿಯಲ್ಲಿ ಇದೆ ಅನ್ನುವುದು ಕಳ್ಳರಿಗೆ ಮುಂಚಿತವಾಗಿಯೇ ತಿಳಿದಿತ್ತು. ಈ ಕಾರಣಕ್ಕೆ ಅವರು ಮನೆಯ ಮುಂಭಾಗಕ್ಕೆ ಬಂದು ಕಳ್ಳತನ ನಡೆಸಿದ್ದಾರೆ. ಶ್ವಾನಕ್ಕೂ ಗೊತ್ತಾಗದಂತೆ ಎಚ್ಚರಿಕೆಯಿಂದ ಬಂದಿರುವ ಇವರಿಗೆ ಮೊದಲೇ ಎಲ್ಲವೂ ಗೊತ್ತಿತ್ತು ಅನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮನೆಯಿಂದ ಉಂಗುರ ಸೇರಿದಂತೆ 40 ಗ್ರಾಂ ಚಿನ್ನಾಭರಣ ಮತ್ತು 20 ಸಾವಿರ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಮಡಿಕೇರಿ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳಿಕೆ, ಕ್ರೈಂ ವಿಭಾಗದ ಶ್ರೀನಿವಾಸಲು, ಸಿಬ್ಬಂದಿ ರಮೇಶ್, ಬಸವರಾಜ್, ಮಧು, ನಾಗರಾಜ್ ಬೆರಳಚ್ಚು ತಜ್ಞರು , ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಸುತ್ತಮುತ್ತ ಸಿಸಿಟಿವಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.