ನ್ಯೂಸ್ ನಾಟೌಟ್: ಸರಕಾರ, ಜನ ಪ್ರತಿನಿಧಿಗಳು ಇರೋದು ಜನರ ಸಂಕಷ್ಟ ಕೇಳೋಕ್ಕೆ, ಜನರನ್ನು ಕಷ್ಟಕ್ಕೆ ದೂಡುವುದಕ್ಕಲ್ಲ. ಕೇವಲ ಬಿಲ್ ಕಟ್ಟಿಲ್ಲವೆಂಬ ಕಾರಣಕ್ಕೆ ಅಜ್ಜಾವರದ ಬೊಯಂಬೊ ದಲಿತ ಕಾಲೊನಿಯ 47 ಕುಟುಂಬಗಳಿಗೆ ನೀರು ನಿಲ್ಲಿಸಿರೋದು ಅಕ್ಷಮ್ಯ. ಮನೆ ಬಾಡಿಗೆ ಕಟ್ಟಿಲ್ಲವೆಂಬ ಕಾರಣಕ್ಕೆ ಮನೆಯ ಮಾಲೀಕ ಮನೆಯಿಂದ ಗ್ರಾಹಕನ ವಸ್ತುಗಳನ್ನೆಲ್ಲ ಹೊರಗೆ ಎಸೆದು ದರ್ಪದಿಂದ ನಡೆದುಕೊಳ್ಳುವುದನ್ನು ನಾವು ಸಿನಿಮಾದಲ್ಲಿ ನೋಡಿದ್ದೇವೆ. ಅದೇ ರೀತಿ ದಲಿತರಿಗೆ ಹಣ ಕಟ್ಟುವುದಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಗ್ರಾಮ ಪಂಚಾಯತ್ ಪಿಡಿಒ ನೀರಿನ ಪಂಪ್ ಗೆ ಬೀಗ ಜಡಿದಿರೋದು ಒಪ್ಪುವಂತಹ ವಿಚಾರ ಅಲ್ಲವೇ ಅಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರಿಗಾಗಿ ಸಂವಿಧಾನದಲ್ಲಿ ವಿಶೇಷವಾದ ಸ್ಥಾನಮಾನಗಳನ್ನು ನೀಡಿದರು. ಸಮಾಜದಲ್ಲಿ ಶೋಷಿತ ವರ್ಗಕ್ಕೆ ಶಕ್ತಿ ತುಂಬುವಂತಹ ಕೆಲಸ ಮಾಡಿದ್ದರು. ಆ ಮಹಾನಾಯಕನ ಕನಸು ಎಲ್ಲರಿಗೂ ಮೂಲಭೂತ ಸೌಕರ್ಯ ಸಿಗಬೇಕು ಅನ್ನೋದು. ಅಂತಹ ನಾಯಕನ ಆದರ್ಶ ಗುಣಗಳನ್ನು ನಾವು ಪಾಲಿಸುತ್ತಿಲ್ಲ ಅನ್ನುವುದಕ್ಕೆ ಇದೊಂದು ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಹಾಗಾದ್ರೆ ನೀವು ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸೋರನ್ನು ಏಕೆ ಸುಮ್ಮನೆ ಬಿಟ್ಟಿದ್ದೀರಿ..?, ವಿವಿಧ ಬ್ಯಾಂಕ್ ಗಳಲ್ಲಿ ಸಾವಿರಾರು ರೂ. ಕೋಟಿ ಹಣವನ್ನು ತಿಂದು ತೇಗಿ ಉಂಡು ಅಡ್ಡಡ್ಡ ಮಲಗಿದ ಬಕಾಸುರರಿಗೆ ಇನ್ನೂ ಶಿಕ್ಷೆ ಕೊಡಿಸಲು ನಿಮ್ಮ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ..? ಸ್ವಿಸ್ ಬ್ಯಾಂಕ್ ಗಳಲ್ಲಿ ನಮ್ಮ ರಾಜಕಾರಣಿಗಳು ಇಟ್ಟಿರುವ ಕೋಟಿ..ಕೋಟಿ ಹಣದ ಬಗ್ಗೆ ನೀವುಗಳು ಮಾತೇ ಎತ್ತಲ್ಲ. ನಿಮ್ಮ ಕಣ್ಣೆದುರಿಗೇ ಅನ್ಯಾಯ ನಡೆದರೆ ಅದನ್ನೂ ಪ್ರತಿಭಟಿಸುವ ಧೈರ್ಯವೂ ನಿಮಗಿಲ್ಲ ಅಂದ ಮೇಲೆ ಬಡಪಾಯಿ ಜನರ ಕುಡಿಯುವ ನೀರನ್ನು ಕಿತ್ತುಕೊಳ್ಳಲು ನಿಮಗೆ ಸುಲಭವಾಗಿ ಎಲ್ಲಿಂದ ಬಂತು ಧೈರ್ಯ..! ಇದಕ್ಕಷ್ಟು ನೀವು ಉತ್ತರ ಕೊಡಿ ಸಾಕು..ಈ ಹಿಂದೆ ರಾಜ್ಯದ ಅನೇಕ ಗ್ರಾಮ ಪಂಚಾಯತ್ ಗಳಲ್ಲಿ ಜನರು ಹಣ ಕಟ್ಟಲಾಗದಂತಹ ಸಂದರ್ಭ ಬಂದಿತ್ತು. ಆಗೆಲ್ಲ ಅಲ್ಲಿನ ಆಡಳಿತ ವರ್ಗ, ಅಧಿಕಾರಿಗಳು ಕುಳಿತು ಚಿಂತಿಸಿ ಜನಪರ ಕಾಳಜಿಯನ್ನೇ ವಹಿಸಿದ್ದಾರೆ. ಉಸಿರಿನ ಮೂಲ ಜೀವ ಜಲ ನೀರನ್ನೇ ನಿಲ್ಲಿಸುವ ಹಂತಕ್ಕೆ ಹೋಗಿರಲಿಲ್ಲ ಅನ್ನುವುದನ್ನು ಗಮನಿಸಬೇಕು.
ನೀರು ಅನ್ನೋದು ಪ್ರಕೃತಿ ಕೊಟ್ಟಿದ್ದು. ಅದಕ್ಕೆ ಹಣದ ರೂಪ ಕೊಟ್ಟಿರುವುದು ನಮ್ಮ ವ್ಯವಸ್ಥೆ. ಹಾಗಿರುವಾಗ ವ್ಯವಸ್ಥೆಯಲ್ಲಿ ಕೆಲವೊಂದು ಸಮಸ್ಯೆಗಳು ಬಂದೇ ಬರುತ್ತದೆ. ಅದಕ್ಕೆ ನೀರು ನಿಲ್ಲಿಸುವುದೇ ಒಂದು ಪರಿಹಾರ ಅಲ್ಲ. ಅಲ್ಲಿ ಹತ್ತಾರು ಮಂದಿ ಗರ್ಭಿಣಿಯರಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧ ಜೀವಗಳಿವೆ. ಇನ್ನೂ ಲೋಕ ಅರಿಯದ ಪುಟ್ಟ ಕಂದಮ್ಮಗಳಿವೆ. ಶಾಲೆಗೆ ಹೋಗುವ ಅನೇಕ ಮಕ್ಕಳಿದ್ದಾರೆ. ಇವರೆಲ್ಲ ಏನು ತಪ್ಪು ಮಾಡಿದ್ದಾರೆ..? ಇವರಿಗೆಲ್ಲ ಯಾಕೆ ಶಿಕ್ಷೆ…? ನಿಮ್ಮ ಬಿಗಿ ಆಡಳಿತದಿಂದ ಅವರು ಕಟ್ಟಬೇಕಾಗಿರುವ ಹಣವನ್ನು ಬೇಕಾದರೆ ವಾಪಸ್ ತಂದು ಕೊಡಬಹುದು. ಆದರೆ ನಾಳೆ ಅನಾಹುತ ಸಂಭವಿಸಿದರೆ ಹೋದ ಜೀವವನ್ನು ನಿಮಗೆ ವಾಪಸ್ ತರುವುದಕ್ಕೆ ಸಾಧ್ಯವೇ..? ಇಂತಹ ಸಮಸ್ಯೆ ಎದುರಾದಾಗ ಮೊದಲು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆ ಹರಿಸುವುದರತ್ತ ಯೋಚಿಸಿ. ಜನವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ವರ್ತಿಸುವ ಹಕ್ಕು ಯಾರಿಗೂ ಇಲ್ಲ. ಹಾಗೆ ಮಾಡಿದ್ದೇ ಆದರೆ ಅಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಸ್ವಯಂಪ್ರೇರಿತರಾಗಿ ಕ್ರಮಕ್ಕೆ ಮುಂದಾಗಬೇಕು. ಮೊದಲು ಅಲ್ಲಿನ ಜನರಿಗೆ ನೀರು ಬಿಡಿ. ಇಂತಿಷ್ಟು ಸಮಯ ಅಂತ ಅವರಿಗೆ ಹಣ ಪಾವತಿಸುವುದಕ್ಕೆ ಗಡುವು ನೀಡಿ..ಅಥವಾ ಶಾಸಕಿ ಭಾಗೀರಥಿ ಮುರುಳ್ಯ ಅವರ ಗಮನಕ್ಕೆ ತನ್ನಿ. ಮೇಲಾಧಿಕಾರಿಗಳ ಜೊತೆಗೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಸುಗಮ ಜೀವನಕ್ಕೆ ಅವಕಾಶ ಮಾಡಿಕೊಟ್ಟರೆ ಬಡ ಜೀವ ಬದುಕೀತು ಅನ್ನೋದನ್ನು ಮರೆಯಬೇಡಿ.