ನ್ಯೂಸ್ ನಾಟೌಟ್: ನಾವು ಮಾಡೊ ಕೆಲಸ ಯಾವುದಾದರೇನು..? ನಮ್ಮ ..ನಮ್ಮ ಕ್ಷೇತ್ರದಲ್ಲಿ ನಮಗೆ ನಮ್ಮದೇ ಆದ ಜವಾಬ್ದಾರಿಗಳಿರುತ್ತದೆ. ಹಾಗೆನೇ ಪತ್ರಿಕೋದ್ಯಮ ಕೂಡ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಸಮಾಜದಲ್ಲಿ ನಿಭಾಯಿಸಲೇಬೇಕಾದ ಒಂದಷ್ಟು ಜವಾಬ್ದಾರಿ ಇದೆ. ಇದನ್ನೇ ನಾವು ಸಾಮಾಜಿಕ ಹೊಣೆಗಾರಿಕೆ ಅನ್ನೋದು. ಪತ್ರಕರ್ತರೆಂದ್ರೆ ದೇವರಲ್ಲ. ಆದರೆ ಒಂದು ಕಾಲದಲ್ಲಿ ಅವರಿಗೆ ಸಿಗುತ್ತಿದ್ದ ಗೌರವ ಆತಿಥ್ಯಗಳು ದೇವರ ಸ್ಥಾನದಲ್ಲಿದ್ದವು. ಆ ದಿನಗಳಲ್ಲಿ ಬಡತನದಲ್ಲಿದ್ದರೂ ಪತ್ರಕರ್ತ ತನ್ನ ಬದ್ಧತೆಯನ್ನ ಮರೆತಿರಲಿಲ್ಲ. ಸಮಾಜದೊಳಗೊಂದಾಗಿ ನೋವು ನಲಿವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದ. ಜುಬ್ಬಾ ಪೈಜಾಮ, ಬಗಲಿಗೊಂದು ಜೋಳಿಗೆ ನೇತುಹಾಕಿಕೊಳ್ಳುವ ಸಿಂಪಲ್ ಪತ್ರಕರ್ತನ ಕಂಡರೆ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮೈನಡುಕ ಹುಟ್ಟುತ್ತಿತ್ತು. ಈಗಿನ ಹೆಚ್ಚಿನ ಫೇಕ್ ಪತ್ರಕರ್ತರನ್ನು ನೋಡಿದರೆ ರಾಜಕಾರಣಿಗಳು , ಅಧಿಕಾರಿಗಳು ಕ್ಯಾರೆ ಅನ್ನುವುದಿಲ್ಲ..! ಬರೀ..ಕ್ಯಾಶ್ ಅಂಡ್ ಕ್ಯಾರಿ (ಸಿಸಿ) ಅಷ್ಟೇ..!
ನಾವು ಪತ್ರಿಕಾರಂಗವನ್ನು ಬಹುಕಾಲ ಆಳಿದ ಖಾದ್ರಿ ಶಾಮಣ್ಣ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ನಾನು ಅವರ ಮೊಮ್ಮಗನ ಪ್ರಾಯದ ಪತ್ರಕರ್ತ ಇರಬಹುದು. ಅವರ ಜೊತೆ ಕೆಲಸ ಮಾಡದಿರಬಹುದು. ಆದರೆ ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದೇನೆ. ಇದೆಲ್ಲವು ನನಗೆ ಸಿಕ್ಕಿದ್ದು ಸಜ್ಜನ ಹಿರಿಯ ಪತ್ರಕರ್ತ ಮಿತ್ರರ ಒಡನಾಟದಿಂದ. ಈ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹೀಗೆ ಮಾತನಾಡುವಾಗ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಿದ್ದರು…ಖಾದ್ರಿ ಶಾಮಣ್ಣ ನೇರ ನಡೆ ನುಡಿಯ ವ್ಯಕ್ತಿತ್ವದವ ಬಗ್ಗೆ, ಶಾಮಣ್ಣ ಅವರ ಎದುರು ನಿಂತು ಮಾತನಾಡುವುದಕ್ಕೂ ರಾಜಕಾರಣಿಗಳು, ಅಧಿಕಾರಿಗಳು ಭಯ ಪಡುತ್ತಿದ್ದರೆಂದು. ಒಬ್ಬ ಪತ್ರಕರ್ತ ಯಶಸ್ವಿ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ..? ಅಂತಹ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವಾಗ ನನಗೆ ಮೈ ರೋಮಾಂಚನವಾಗುತ್ತಿತ್ತು. ಅಂತಹ ಪತ್ರಕರ್ತರ ಜೊತೆ ಕೆಲಸ ಮಾಡುವ ಭಾಗ್ಯ ಸಿಗದ್ದಕ್ಕೆ ನಿಜಕ್ಕೂ ಬೇಸರವಿದೆ. ಕತ್ತಿಗಿಂತ ಲೇಖನಿಯೇ ಹರಿತ ಅನ್ನುವ ಮಾತಿದೆ. ಈ ಮಾತು ಖಾದ್ರಿ ಶಾಮಣ್ಣ ಅವರಿಗೆ ಸರಿಯಾಗಿ ಒಪ್ಪುತ್ತಿತ್ತಂತೆ. ಅವರ ಸಂಪಾದಕೀಯ ಬರಹಗಳಿಗೆ ಎಷ್ಟು ಪವರ್ ಇತ್ತೆಂದರೆ ಸರ್ಕಾರವನ್ನೇ ಬದಲಾಯಿಸುವಷ್ಟು. ಅಂದರೆ ನಾವು ಈಗಿನ ಪತ್ರಿಕೋದ್ಯಮವನ್ನು ಹೋಲಿಕೆ ಮಾಡುವುದಕ್ಕೂ ಸಾಧ್ಯವಿಲ್ಲ. ತಮ್ಮ ಸಂಪಾದಕೀಯ ಬರಹಗಳಿಂದಲೇ ಸರ್ಕಾರವನ್ನು ಬದಲಾಯಿಸಬಲ್ಲ ಶಕ್ತಿ ಹೊಂದಿದ್ದ ಖಾದ್ರಿ ಶಾಮಣ್ಣ ಕನ್ನಡದ ಅನೇಕ ಪತ್ರಿಕೆಗಳಿಗೆ ಸುದ್ದಿ ಸಂಪಾದಕರಾಗಿ, ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಮೊದಲ ಕಾಂಗ್ರಸ್ಸೇತರ ಸರ್ಕಾರ ರಚಿತವಾಗುವಲ್ಲಿ ಶಾಮಣ್ಣ ಅವರ ಪಾಲು ಕೂಡ ದೊಡ್ಡದು ಅನ್ನೋದು ವಿಶೇಷ. ನಾನು ಇದೆಲ್ಲ ಪೀಠಿಕೆ ಹಾಕುವುದಕ್ಕೂ ಒಂದು ಕಾರಣ ಬೇಕಲ್ಲ..? ಕಾರಣ ಇದ್ದೇ ಇದೆ. ಹಾಗೆ ಸುಮ್ಮನೆ ಮೊಬೈಲ್ ನಲ್ಲಿ ಸ್ಕ್ರಾಲ್ ಮಾಡುತ್ತಿದ್ದೆ. ಪತ್ರಕರ್ತೆ ವಿಜಯ ಲಕ್ಷ್ಮೀ ಶಿಬರೂರು ಮಾತನಾಡಿರುವ ವಿಡಿಯೋ ತುಣುಕೊಂದನ್ನು ನೋಡಿದೆ. ಹಿರಿಯ ಪತ್ರಕರ್ತರ ಸಮ್ಮುಖದಲ್ಲೇ ವಿಜಯ ಲಕ್ಷ್ಮೀ ಈಗಿನ ಬಕೆಟ್ ಪತ್ರಿಕೋದ್ಯಮದ ವಿರುದ್ಧ ಬಹಳ ಸ್ಪಷ್ಟವಾಗಿ ಮಾತನಾಡಿದ್ದರು. ನಕಲಿ ಪತ್ರಕರ್ತರು, ಸುಲಿಗೆಕೋರರೇ ಪತ್ರಿಕೋದ್ಯಮದಲ್ಲಿ ತುಂಬಿಕೊಂಡಿದ್ದಾರೆ. ಇವರಿಂದೆಲ್ಲ ಏನು ನಿರೀಕ್ಷೆ ಮಾಡಲು ಸಾಧ್ಯ..? ಹಿರಿಯ ಪತ್ರಕರ್ತರು ಇದನ್ನೆಲ್ಲ ನೋಡಿಕೊಂಡು ಏಕೆ ಸುಮ್ಮನೆ ಕುಳಿತುಕೊಂಡಿದ್ದೀರಿ..? ನಿಮಗೆ ಇದನ್ನೆಲ್ಲ ತಡೆಯಲು ಸಾಧ್ಯವಿಲ್ಲವೇ..? ನಮ್ಮ ಮನೆಯನ್ನು ಸ್ವಚ್ಛ ಮಾಡುವುದಕ್ಕೆ ನಮಗೇ ಆಗದಿದ್ದ ಮೇಲೆ ನಮ್ಮ ಬದ್ಧತೆ ಏನು..? ಅನ್ನುವುದನ್ನು ವಿಜಯಲಕ್ಷ್ಮೀ ಕಾರ್ಯಕ್ರಮವೊಂದರಲ್ಲಿ ನೇರವಾಗಿ ಪ್ರಶ್ನಿಸಿದ್ದರು. ನನಗೆ ಇವರ ಮಾತುಗಳಲ್ಲಿ ನಿಜವಿದೆ ಅನಿಸಿತು. ಇವತ್ತು ಎಲ್ಲೋ ಒಂದು ಮೂಲೆಯಲ್ಲಿ ಯಾವುದೇ ಅನುಭವ ಇಲ್ಲದೆ ಯೂಟ್ಯೂಬ್ ಚಾನಲ್ ಮಾಡಿಕೊಂಡವ ಕೂಡ ಪತ್ರಕರ್ತ ಅಂತ ಬೋರ್ಡ್ ನೇತು ಹಾಕಿಕೊಂಡಿರುತ್ತಾನೆ. ಎರಡಕ್ಷರ ಬರೆಯಲು ಬಾರದಿದ್ದರೂ ಆತ ಪತ್ರಕರ್ತ ಅಂತ ವಸೂಲಿಗೆ ಇಳಿಯುವುದನ್ನು ನೋಡಿದ್ದೇವೆ. ಹತ್ತಾರು ವರ್ಷ ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಬೆವರು ಸುರಿಸಿ, ನೂರಾರು ಅವಮಾನ, ಟೀಕೆ, ಟಿಪ್ಪಣಿಗಳನ್ನು ಎದುರಿಸಿ ಫೀಲ್ಡ್ ಮತ್ತು ಡೆಸ್ಕ್ ನಲ್ಲಿ ಕೆಲಸ ಮಾಡಿದ ನೈಜ ಪತ್ರಕರ್ತ ಕೆಲಸಕ್ಕೆ ಬಾರದವ ಆಗಿರುತ್ತಾನೆ. ಆದರೆ ನಕಲಿ ಪತ್ರಕರ್ತ ಊರಿಗೇ ದೊಡ್ಡವನಾಗಿರುತ್ತಾನೆ..! ಇದೆಂತಹ ವಿಪರ್ಯಾಸ. ನಾವು ನಕಲಿ ವೈದ್ಯರನ್ನು ಗುರುತಿಸಿ ಕಾನೂನಿನಡಿ ಶಿಕ್ಷೆಗೆ ಒಳಪಡಿಸುತ್ತೇವೆ. ಅಂತೆಯೇ ರಾಜ್ಯದ ಬ್ರ್ಯಾಂಡ್ ಇರುವ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡದೆ, ಅನುಭವ ಪಡೆಯದೇ ಇರುವವರನ್ನು ಗುರುತಿಸಬೇಕು. ಪತ್ರಕರ್ತ ಅಂತ ಸುಮ್ಮನೆ ಹೇಳಿಕೊಂಡು ವಸೂಲಿಗೆ ಇಳಿಯುವವರನ್ನು ಕಾನೂನಿನಡಿ ತಂದು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪತ್ರಿಕೋದ್ಯಮವನ್ನು ಆರಂಭಿಸುವವನಿಗೆ ಇಂತಿಷ್ಟು ಅನುಭವ ಇರಬೇಕು ಅನ್ನುವ ನಿಯಮವನ್ನು ಸರ್ಕಾರ ಏಕೆ ತರಬಾರದು..? ಈ ಕ್ರಮಕ್ಕೆ ಸರ್ಕಾರ ಮುಂದಾದರೆ ನಕಲಿ ಕೊಂಡಿಗಳೆಲ್ಲ ಕಳಚಿಬೀಳುತ್ತವೆ. ಹೀಗೆ ಮಾಡದೇ ಬಿಟ್ಟರೆ ಪತ್ರಕರ್ತರ ಸೋಗಿನಲ್ಲಿ ಕೆಲವರು ಇಡೀ ಉದ್ಯಮವನ್ನು ಹಾಳು ಮಾಡಿ ಪತ್ರಕರ್ತರೆಂದರೆ ಛೀ..ಥೂ ಅಂತ ಉಗಿಯುವ ಸ್ಥಿತಿಗೆ ತಂದು ನಿಲ್ಲಿಸಿಬಿಡುತ್ತಾರೆ. ಪತ್ರಕರ್ತರ ಸಂಘಕ್ಕೆ ಸೇರುವವರ ಬಗ್ಗೆಯೂ ಆಕ್ಷೇಪಗಳಿವೆ. ಪತ್ರಕರ್ತರಲ್ಲದೆ ಇರುವವರು ಕೂಡ ಇದ್ದಾರೆ ಅನ್ನುವ ಚರ್ಚೆ ಇದೆ. ಎಲ್ಲದಕ್ಕೂ ಒಂದು ಕೊನೆ ಬೀಳಲಿ, ನೈಜ, ಸತ್ಯ-ಸಮರ್ಥವಾದ ಪತ್ರಿಕೋದ್ಯಮ ಸದಾ ಅಸ್ತಿತ್ವದಲ್ಲಿರಲಿ ಅನ್ನುವುದು ನಮ್ಮ ಕಳಕಳಿ.