ನ್ಯೂಸ್ ನಾಟೌಟ್: ಸಂಘಪರಿವಾರದ ಹೋರಾಟಗಾರ, ಬಿಜೆಪಿ ಕಟ್ಟಾಳು ನಾರಾಯಣಸಾ ಭಾಂಡಗೆ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದೆ ಎಂದು ವರದಿ ತಿಳಿಸಿದೆ. ಬಿಜೆಪಿ ಘೋಷಣೆ ಬೆನ್ನಲ್ಲೇ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ರಾಜ್ಯಸಭಾ ಸ್ಥಾನಕ್ಕೆ ನನ್ನ ಹೆಸರು ಘೋಷಣೆಯಾಗುತ್ತೆ ಎಂದು ನಾನು ಭಾವಿಸಿರಲಿಲ್ಲ.
ನನ್ನ ಹೋರಾಟ ಹಾಗೂ ಹಿರಿತನ ಮನಗಂಡು ಪಕ್ಷದ ಹಿರಿಯರು ನನಗೆ ರಾಜ್ಯಸಭಾ ಸ್ಥಾನ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿ, ಗುರುತಿಸುವುದು ಬಿಜೆಪಿಯಲ್ಲಿ ಮಾತ್ರ ಎಂದು ನಾರಾಯಣಸಾ ಹೇಳಿದ್ದಾರೆ. ನಾರಾಯಣಸಾ ಭಾಂಡಗೆ ಸಂಘದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ತಮ್ಮ 17 ನೇ ವಯಸ್ಸಿಗೆ ಆರ್ಎಸ್ಎಸ್ ಸೇರ್ಪಡೆಯಾಗಿದ್ದರು. ಬಾಗಲಕೋಟೆಯಲ್ಲಿ ಎಬಿವಿಪಿ ಸಂಸ್ಥಾಪಕ ಸದಸ್ಯರೂ ಆಗಿದ್ದರು.
ವಿಶ್ವ ಹಿಂದೂ ಪರಿಷತ್ನಲ್ಲೂ ಸೇವೆ ಸಲ್ಲಿಸಿದ್ದಾರೆ. 1973 ರಲ್ಲಿ ಅಂದಿನ ಜನಸಂಘ ಸೇರ್ಪಡೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಇಂದಿರಾ ಗಾಂಧಿ ಅವರು ಆಲಮಟ್ಟಿ ಜಲಾಶಯಕ್ಕೆ ಭೇಟಿ ಕೊಟ್ಟಾಗ ಕಪ್ಪು ಬಾವುಟ ತೋರಿಸಿ ವಿರೋಧ ವ್ಯಕ್ತಪಡಿಸಿ ಬಂಧನಕ್ಕೆ ಒಳಗಾಗಿದ್ದರು. ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದವರಲ್ಲಿ ಇವರೂ ಸಹ ಒಬ್ಬರು.
ಇವರು ರಾಮಮಂದಿರ ಕರಸೇವಕರೂ ಹೌದು. ರಾಮಮಂದಿರ ನಿರ್ಮಾಣಕ್ಕೆ ರಾಮ ಶಿಲೆ ಸಂಗ್ರಹಿಸಿ ಕಳಿಸಿದ್ದಾರೆ. ಕಾಶ್ಮೀರದ ಲಾಲ್ ಚೌಕ್ನಲ್ಲಿ ತಿರಂಗ ಹಾರಿಸುವ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಹುಬ್ಬಳ್ಳಿ ಈದ್ಗಾ ಮೈದಾನದ ರಾಷ್ಟ್ರಧ್ವಜ ಹಾರಿಸಿ ಲಾಠಿ ಏಟು ತಿಂದಿದ್ದರು. ಸಂಘ ಮತ್ತು ಪಕ್ಷಕ್ಕಾಗಿ 35-40 ಕೇಸ್ಗಳನ್ನು ಹಾಕಿಸಿಕೊಂಡು 15 ಸಲ ಜೈಲುವಾಸ ಅನುಭವಿಸಿದ್ದಾರೆ ಎನ್ನಲಾಗಿದೆ.