ನ್ಯೂಸ್ ನಾಟೌಟ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದ 7 ಅಪರಾಧಿಗಳ ಬೈಕಿ ಒಬ್ಬರಾದ ಶಾಂತನ್ ಇಂದು ಬೆಳಗ್ಗೆ(ಫೆ.28) ಚೈನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
55 ವರ್ಷದ ಶ್ರೀಲಂಕಾದ ಟಿ ಸುತೇಂದ್ರರಾಜ ಅಲಿಯಾಸ್ ಸಂತನ್ 32 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು. ಲಿವರ್ ವೈಫಲ್ಯ, ಬಹು ಅಂಗಾಗಲ ವೈಫಲ್ಯದಿಂದ ಜನವರಿ ತಿಂಗಳಲ್ಲಿ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಸಂತನ್ ಇಂದು(ಫೆ.28) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
1991ರಲ್ಲಿ ಶ್ರೀಪೆರಂಬದೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯನ್ನು ಆತ್ಮಾಹುತಿ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗಿತ್ತು. ರಾಜೀವ್ ಗಾಂಧಿ ಹತ್ಯೆಗೆ ಬಹುದೊಡ್ಡ ಪ್ಲಾನ್ ಮಾಡಲಾಗಿದ್ದು, ಅದರ ಪ್ರಕಾರ ಶ್ರೀಲಂಕಾದಿಂದ ಭಾರತಕ್ಕೆ ಬಂದು ವ್ಯವಸ್ಥಿತವಾಗಿ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು.
ಈ ಪೈಕಿ 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 32 ವರ್ಷಗಳ ಬಳಿಕ 6 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ನವೆಂಬರ್ 2022ರಲ್ಲಿ ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇತರ ಅಪರಾಧಿಗಳು ಶ್ರೀಲಂಕಾಗೆ ಮರಳಿದರೆ, ಸಂತನ್ ಬಳಿ ಪಾಸ್ಪೋರ್ಟ್ ಸೇರಿದಂತೆ ಯಾವುದೇ ದಾಖಲೆಗಳು ಇಲ್ಲದ ಕಾರಣ ತಿರುಚಿ ಕಾರಗೃಹದ ವಿಶೇಷ ಶಿಬಿರಕ್ಕೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾಗಿದ್ದರೂ ಸಂತನ್ಗೆ ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ತನ್ನ ಕುಟುಂಬಸ್ಥರನ್ನು, ತಾಯಿಯನ್ನು ನೋಡುವ ಭಾಗ್ಯ ಸಿಕ್ಕಿರಲಿಲ್ಲ.
2023ರಲ್ಲಿ ಸಂತನ್ ಮದ್ರಾಸ್ ಹೈಕೋರ್ಟ್ಗೆ ವಿಶೇಷ ಅರ್ಜಿಯೊಂದನ್ನು ಸಲ್ಲಿಸಿದ್ದರು. ಜೈಲಿನಿಂದ ಬಿಡಗಡೆಗೊಂಡಿರುವ ತನಗೆ ತವರಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಪಾಸ್ಪೋರ್ಟ್ ಸೇರಿದಂತೆ ಯಾವುದೇ ದಾಖಲೆಗಳು ತನ್ನ ಬಳಿ ಇಲ್ಲದ ಕಾರಣ ತವರಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮದ್ರಾಸ್ ಹೈಕೋರ್ಟ್ ತನಗೆ ತವರಿಗೆ ಮರಳಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆಯ ಹಂತದಲ್ಲಿರುವಾಗಲೇ ಬಹುಅಂಗಾಂಗ ವೈಫಲ್ಯ, ಹೃದಯಾಘಾತದಿಂದ ಸಂತನ್ ಮೃತಪಟ್ಟಿದ್ದಾರೆ.