ನ್ಯೂಸ್ ನಾಟೌಟ್ : ಬಡ ಕುಟುಂಬದ ಆಕೆಗೆ ಒಂದು ಮಗುವಿತ್ತು. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಆಕೆಗೆ ಹೊಟ್ಟೆ ದಪ್ಪ ಆಗಿತ್ತು. ಹೀಗಾಗಿ ಗರ್ಭಿಣಿ ಆಗಿದ್ದೇನೆ ಎಂದುಕೊಂಡಿದ್ದಳು.
ದಿಢೀರ್ ಹೊಟ್ಟೆ ನೋವು ಕಾಣಿಸಿಕೊಂಡಾಗ ತಾಲೂಕು ಆಸ್ಪತ್ರೆಗೆ ಹೋಗಿದ್ದಳು. ಅಲ್ಲಿ ವೈದ್ಯರು ಸ್ಕಾನಿಂಗ್ ಮಾಡಿ ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಮಗು ಇರಲಿಲ್ಲ. ಬದಲಿಗೆ ನಾಲ್ಕೂವರೆ ಕೆಜಿ ತೂಕದ ಗಡ್ಡೆ ಬೆಳೆದಿತ್ತು ಎಂದು ತಿಳಿದು ಮಹಿಳೆ ಅಚ್ಚರಿಗೆ ಒಳಗಾಗಿದ್ದಾಳೆ. ಸಿದ್ದೇನಾಯಕನಹಳ್ಳಿಯ ಶೀಲಾ (34) ಎಂಬಾಕೆ ಎಲ್ಲಿಯೂ ಪರೀಕ್ಷೆ ಮಾಡಿಸಿಕೊಳ್ಳದೆ ಹೊಟ್ಟೆ ದಪ್ಪವಾಗಿದ್ದರಿಂದ ತನ್ನಷ್ಟಕ್ಕೆ ತಾನೇ ಪ್ರಗ್ನೆಟ್ ಆಗಿದ್ದೇನೆ ಎಂದು ತಿಳಿದುಕೊಂಡಿದ್ದಳು. ತನ್ನ ಒಡಲಿನಲ್ಲಿ ಕೂಸು ಹುಟ್ಟುತ್ತಿದೆ ಎಂದು ಸಂತೋಷವಾಗಿದ್ದಳು.
ಆದರೆ ಈ ಖುಷಿ ಹೆಚ್ಚು ಸಮಯ ಇರಲಿಲ್ಲ. ಒಂದು ದಿನ ಬೆಳಗ್ಗೆ ಶೀಲಾಗೆ ಸಹಿಸಿಕೊಳ್ಳಲಾಗದಷ್ಟು ಹೊಟ್ಟೆನೋವು ಕಾಣಿಸಿಕೊಂಡಿತ್ತು. ಮಗು ಬದಲಿಗೆ ಗರ್ಭಕೋಶದಲ್ಲಿ ಬೃಹತ್ ಗಡ್ಡೆ ಬೆಳೆದಿತ್ತು. ಈ ವೇಳೆ ವೈದ್ಯರು ಆಪರೇಶನ್ ಮಾಡಿ ಗಡ್ಡೆಯನ್ನು ತೆಗಿಯಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಳ್ಳುವಷ್ಟು ಶೀಲಾ ಬಳಿ ಹಣ ಇರಲಿಲ್ಲ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಳು. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆದು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಯಾವ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲವೆಂಬಂತೆ ಉಚಿತವಾಗಿ ಆಪರೇಷನ್ ಮಾಡಿ, ಬಡ ಮಹಿಳೆಯ ಜೀವ ಉಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯರ ಈ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದಾರೆ.