ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಮಕ್ಕಳಿಗೆ 6 ವರ್ಷ ತುಂಬಿದ್ರೆ ಸಾಕು.ಎದುರುತ್ತರ ಕೊಡುತ್ತಾರೆ ಅನ್ನೋ ಮಾತುಗಳನ್ನು ಹೆಚ್ಚಿನ ಪೋಷಕರು ಹೇಳುತ್ತಾರೆ. ಕೆಲವು ಪೋಷಕರು ನಮ್ಮ ಮಕ್ಕಳು ನಮ್ಮ ಯಾವುದೇ ಮಾತನ್ನು ಕೇಳುವುದಿಲ್ಲ ಎನ್ನುವ ದೂರು ಹೇಳುವುದನ್ನು ನೀವು ಕೇಳಿರಬಹುದು.
ಹೌದು, ಮಕ್ಕಳು ಬೆಳೆದಂತೆ ಅವರ ನಡವಳಿಕೆಯಲ್ಲಿ ಬದಲಾವಣೆಗಳು ಕಂಡು ಬರುವುದು ಸಹಜ.ಯಾಕೆಂದರೆ ಬೆಳೆಯುತ್ತಿರುವ ಮಕ್ಕಳಲ್ಲಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಲವು ಬದಲಾವಣೆಗಳನ್ನು ಕಾಣಬಹುದು. ಅಂತಹ ಬದಲಾವಣೆಗಳಲ್ಲಿ ಮಕ್ಕಳು ಎದುರುತ್ತರ ಕೊಡುವ ಸ್ವಭಾವವೂ ಒಂದು. ಮೊದಲಿಗೆ ಮಕ್ಕಳ ಈ ಎದುರುತ್ತರ ಕೊಡುವ ಸ್ವಭಾವ ಸ್ವಾಭಾವಿಕ ಎಂದೆನಿಸಿದರೂ ಬರುಬರುತ್ತಾ ಇದು ಪೋಷಕರ ಕೋಪವನ್ನು ಹೆಚ್ಚಿಸಬಹುದು.
ಮಕ್ಕಳ ಈ ಸ್ವಭಾವವನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದಬೇಕಾಗುತ್ತದೆ. ಅವರನ್ನು ಬೈಯುವ ಬದಲಿಗೆ ಅವರ ಸ್ವಭಾವವನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಲು ಪ್ರಯತ್ನ ಪಡಿ.ಮಕ್ಕಳು ತಪ್ಪು ಮಾಡಿದಾಗ ಅವರನ್ನು ದಂಡಿಸುವಷ್ಟು ಸುಲಭವಾಗಿ ಅವರು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಪ್ರಶಂಸಿಸುವುದಿಲ್ಲ.ಆದ್ದರಿಂದ ಪೋಷಕರು ಮಕ್ಕಳು ಒಂದು ಸಣ್ಣ ಕೆಲಸವನ್ನು ಸರಿಯಾಗಿ ಮಾಡಿದರೂ ಪ್ರಶಂಸಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ವೆರಿ ಗುಡ್ ಅನ್ನಬೇಕು. ಇದು ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವುದರ ಜೊತೆಗೆ ಅವರ ನೈತಿಕತೆಯನ್ನು ಕೂಡ ಹೆಚ್ಚಿಸುತ್ತದೆ.
ಕೆಲವೊಮ್ಮೆ ಪೋಷಕರು ಒತ್ತಡದಿಂದ ಇರುವುದರಿಂದಲೋ ಏನೋ ನಿಮ್ಮ ಮಗು ಸುಮ್ಮನೆ ಬೇಸರದಿಂದ ಕುಳಿತಿದೆ ಎನ್ನುತ್ತಾ ಟಿವಿ- ಮೊಬೈಲ್ ಲನ್ನು ಹಾಕಿ ಕೊಡಬಹುದು.ಇದರಿಂದ ಅವರ ಈ ಅಭ್ಯಾಸವನ್ನು ತಪ್ಪಿಸಲು ಬೈಯುವ ಬದಲಿಗೆ ಸೃಜನಶೀಲ ಕೆಲಸವನ್ನು ಮಾಡಲು ಪ್ರೇರೇಪಿಸಬೇಕು. ಅವರ ಮನಸ್ಸು ಸಕಾರಾತ್ಮಕವಾಗಿದ್ದರೆ, ಅವರು ನೀವು ಹೇಳುವುದನ್ನು ಕೇಳುತ್ತಾರೆ.ಇತ್ತೀಚಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಈ ವೇಗದ ಜೀವನಶೈಲಿಯಲ್ಲಿ ಪೋಷಕರಿಗೆ ಮಕ್ಕಳೊಂದಿಗೆ ಕುಳಿತು ಆಟವಾಡಲು, ಅವರ ಮಾತುಗಳನ್ನು ಕೇಳಲು ಸಮಯವೇ ಇರುವುದಿಲ್ಲ. ಆದರೆ, ನಿಮ್ಮ ಮಕ್ಕಳು ಒಳ್ಳೆಯ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ನೀವು ಬಯಸಿದರೆ, ನಿತ್ಯ ಸ್ವಲ್ಪ ಸಮಯವನ್ನು ನಿಮ್ಮ ಮಕ್ಕಳಿಗಾಗಿ ಮೀಸಲಿಡಿ. ಅವರೊಂದಿಗೆ ಒಂದೆರಡು ಪ್ರೀತಿಯ ಮಾತುಗಳನ್ನು ಆಡಿ. ಇದು ಅವರ ತಪ್ಪುಗಳನ್ನು ತಿದ್ದಲು ಸಹಾಯಕವಾಗುವುದರ ಜೊತೆಗೆ ಪೋಷಕರು ನಮ್ಮೊಂದಿಗೆ ಇದ್ದಾರೆ ಎಂಬ ಆತ್ಮಸ್ಥೈರ್ಯವನ್ನು ಕೂಡ ಹೆಚ್ಚಿಸುತ್ತದೆ.
ಇನ್ನೊಂದು ವಿಚಾರವೆಂದರೆ ಹೆಚ್ಚಿನ ಪೋಷಕರು ಮಾಡುವ ಸಾಮಾನ್ಯವಾದ ತಪ್ಪು ಅವರ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೊಲಿಸುವುದು. ಆದರೆ, ನಿಮ್ಮ ಮಕ್ಕಳನ್ನು ಯಾವತ್ತೂ ಬೇರೆ ಮಕ್ಕಳೊಂದಿಗೆ ಹೋಲಿಸಬಾರದು.ನಿಮ್ಮ ಮಕ್ಕಳ ಆಸಕ್ತಿ ಕ್ಷೇತ್ರ ಬೇರೆಯದ್ದೇ ಇರಬಹುದು.ಆದ್ದರಿಂದ ಮಕ್ಕಳನ್ನು ಇತರರೊಂದಿಗೆ ಹೋಲಿಸಿದಾಗ,ಅವರಿಗೆ ಬೇಸರವಾಗಬಹುದು.ಆಸಕ್ತಿ ಕುಂದಬಹುದು. ಹಾಗಾಗಿ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಮಹತ್ವ ನೀಡಿ..ಅವರೊಂದಿಗೆ ಸಾಧ್ಯವಾದಷ್ಟು ಕಾಲ ಕಳೆಯಿರಿ.ಯಾಕೆಂದ್ರೆ ಪ್ರತಿಯೊಬ್ಬ ತಂದೆ ತಾಯಿಗೂ ಮಕ್ಕಳೇ ಪ್ರಪಂಚ ಆಗಿರ್ತಾರೆ ಅನ್ನೋದು ಸುಳ್ಳಲ್ಲ..