ನ್ಯೂಸ್ ನಾಟೌಟ್: ಪಾಕಿಸ್ತಾನ ಪರ ಕೂಗಿದ ಘೋಷಣೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ರಾಜ್ಯ ಸಭೆಗೆ ಆಯ್ಕೆಯಾದ ನಾಸಿರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದೇ ಇದೀಗ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಈಗ ಬಿರುಗಾಳಿಯನ್ನೇ ಸೃಷ್ಟಿಸಲು ಮುಂದಾಗಿದೆ. ಇಂದು ವಿಧಾನಮಂಡಲದ ಉಭಯ ಸಭೆಗಳಲ್ಲಿ ಕೋಲಾಹಲ ಏರ್ಪಡುವ ಸಾಧ್ಯತೆ ಇದೆ.
ಪಾಕ್ ಪರ ಘೋಷಣೆ ಕೂಗಿದ ಕಿಡಿಗೇಡಿಗಳ ವಿರುದ್ಧ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಶಾಸಕರ ಭವನದಿಂದ ವಿಧಾನಸೌಧದ ವರೆಗೆ ರ್ಯಾಲಿ ಆಯೋಜಿಸಿದ್ದರು. ಶಾಸಕರ ಭವನದಿಂದ ವಿಧಾನಸೌಧದವರೆಗೂ ಬಿಜೆಪಿ ಶಾಸಕರ ಪ್ರತಿಭಟನಾ ರ್ಯಾಲಿ ಇಂದು ಬೆಳಗ್ಗೆ ನಡೆದಿದೆ. ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿದ ಶಾಸಕರು ತ್ರಿವರ್ಣ ಧ್ವಜ ಹಿಡಿದು ವಿಧಾನಸೌಧ ಪ್ರವೇಶಿಸಿದರು.
ಬಳಿಕ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಿರುವ ಬಿಜೆಪಿ ಶಾಸಕರು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದು ಸರ್ಕಾರ ಹಾಗೂ ನಾಸಿರ್ ಹುಸೇನ್ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಬಳಿಕ ರಾಜಭವನಕ್ಕೆ ತೆರಳಿ ದೂರು ನೀಡಲಿದ್ದಾರೆ. “ನಿನ್ನೆ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ಈ ಘಟನೆ ನಡೆದ ಬಗ್ಗೆ ಮಾಧ್ಯಮದಲ್ಲಿ ಬಂದಿದೆ. ಅದು ನಿಜವಾಗಿದ್ದಲ್ಲಿ ತೀವ್ರವಾಗಿ ಖಂಡಿಸುತ್ತೇವೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ. “ಈ ಬಗ್ಗೆ ಸುಮೋಟೋ ಕೇಸ್ ದಾಖಲಿಸಲಾಗಿದ್ದು, ವಿವರವಾದ ತನಿಖೆ ನಡೆಸಲಾಗುವುದು” ಎಂದು ಗೃಹಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.