ನ್ಯೂಸ್ ನಾಟೌಟ್ : ಮರು ಮತ ಎಣಿಕೆ ಸಂದರ್ಭದಲ್ಲಿ ಎರಡು ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಶಸ್ತ್ರಸಜ್ಜಿತ ದಾಳಿ ನಡೆದಿದ್ದು, ದಾಳಿಯಲ್ಲಿ ಇಬ್ಬರು ಮೃತಪಟ್ಟ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ಷೇತ್ರವೊಂದರಲ್ಲಿ ಎಂದು ಪೊಲೀಸರು ತಿಳಿಸಿದ್ದಾರೆ.
‘ಬಲೂಚಿಸ್ತಾನ್ ಅವಾಮಿ ಪಾರ್ಟಿ (ಬಿಎಪಿ) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಬೆಂಬಲಿಗರ ನಡುವೆ ಕರಾಚಿ ಗಡಿ ಭಾಗದ ಕೈಗಾರಿಕಾ ಪ್ರದೇಶದಲ್ಲಿರುವ ಚುನಾವಣಾಧಿಕಾರಿ ಕಚೇರಿ ಹೊರಭಾಗದಲ್ಲಿ ಉಭಯ ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಘರ್ಷಣೆಯಲ್ಲಿ ಸುಮಾರು 14 ಮಂದಿ ಗಾಯಗೊಂಡಿದ್ದಾರೆ’ ಎಂದು ವರದಿ ತಿಳಿಸಿದೆ.
ಫೆಬ್ರುವರಿ 8ರಂದು ನಡೆದ ಚುನಾವಣೆಯಲ್ಲಿ ಬಿಎಪಿಯ ಮೊಹಮ್ಮದ್ ಸಲೇಹ್ ಭೂತಾನಿ ರಂಬವರನ್ನು ಗೆದ್ದ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಮತ ತಿರುಚಿದ ಆರೋಪ ಮಾಡಿದ ಪಿಪಿಪಿಯ ಅಲಿ ಹಸನ್ ಝೆಹ್ರಿ, ಫಲಿತಾಂಶ ರದ್ದುಗೊಳಿಸಿ ಮರು ಮತ ಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದರಂತೆ ಬುಧವಾರ ಮರು ಮತ ಎಣಿಕೆ ನಡೆದಿದೆ.
‘39 ಮತಗಟ್ಟೆಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದ ವೇಳೆ ಘರ್ಷಣೆ ನಡೆದಿದೆ. ಉಭಯ ಅಭ್ಯರ್ಥಿಗಳ ಬೆಂಬಲಿಗರ ನಡುವೆ ವಾಗ್ವಾದ ನಡೆದಿದ್ದು, ಇದು ಹಿಂಸಾಚಾರಕ್ಕೆ ಇಳಿಯಿತು. ಗುಂಡಿನ ದಾಳಿಗೆ ಇಬ್ಬರು ಮೃತಪಟ್ಟಿದ್ದಾರೆ’ ಎಂದರು. ಸಾರ್ವತ್ರಿಕ ಚುನಾವಣೆ ನಡದ ಬಳಿಕೆ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅಶಾಂತಿ ಉಂಟಾಗಿದ್ದು, ಮತ ತಿರಚಿಲಾಗಿದೆ ಎಂದು ಆರೋಪಿಸಿದ ಕೆಲ ರಾಜಕೀಯ ಪಕ್ಷಗಳು ಹೆದ್ದಾರಿ ಬಂದ್ ಮಾಡಿ, ಸಂಪೂರ್ಣ ಮುಷ್ಕರಕ್ಕೆ ಕರೆ ನೀಡಿದ್ದವು ಎನ್ನಲಾಗಿದೆ.