ನ್ಯೂಸ್ ನಾಟೌಟ್ : ಕೆಲವು ಶಿಕ್ಷಕರು ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುವ ಕೆಲಸವಷ್ಟೇ ಮಾಡಿ ಮನೆ ಕಡೆ ತೆರಳುತ್ತಾರೆ. ಇನ್ನೂ ಕೆಲವು ಶಿಕ್ಷಕರು ಬರಿ ಪಾಠ ಮಾತ್ರವಲ್ಲದೇ ಶಾಲೆಯಲ್ಲಿ ಮಕ್ಕಲನ್ನು ಪಠ್ಯೇತರ ವಿಷಯದಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂದು ಯೋಚನೆ ಮಾಡುತ್ತಾರೆ. ಆದರೆ ಇಲ್ಲೊಬ್ಬರು ಶಿಕ್ಷಕಿಯಿದ್ದಾರೆ.ಇದೆಲ್ಲದಕ್ಕೂ ಕೊಂಚ ಡಿಫರೆಂಟ್ ಎಂಬಂತಿದ್ದಾರೆ. ಹೌದು, ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ಬಳಿಕ 200ಕ್ಕೂ ಹೆಚ್ಚು ವಸತಿ ರಹಿತ ಕುಟುಂಬಗಳಿಗೆ ಮನೆ ಒದಗಿಸಿದ ಸಂತೃಪ್ತಿ ಇವರಿಗಿದೆ.ಇದೀಗ ತಮ್ಮ ಅಧಿಕೃತ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ.ಹಾಗಾದರೆ ಆ ಶಿಕ್ಷಕಿ ಯಾರು ಎಂಬುದಕ್ಕೆ ಈ ವರದಿ ನೋಡಿ..
ಕೊಚ್ಚಿಯ ತೋಪ್ಪುಂಪಾಡಿಯಲ್ಲಿರುವ ‘ಅವರ್ ಲೇಡಿಸ್ ಕಾನ್ವೆಂಟ್’ ಬಾಲಕಿಯರ ಶಾಲೆಯ ಪ್ರಾಂಶುಪಾಲರಾದ ಲಿಜ್ಜಿ ಚಕ್ಕಲಕ್ಕಲ್ ಇದೀಗ ನಿವೃತ್ತಿಯಾಗುತ್ತಿರುವ ಶಿಕ್ಷಕಿ.ಅವರು ಆರಂಭಿಸಿದ ‘ಹೋಮ್ ಚಾಲೆಂಜ್ ಮಿಷನ್’ನಿಂದಾಗಿ 200ಕ್ಕೂ ಹೆಚ್ಚು ವಸತಿಹೀನ ಕುಟುಂಬಗಳಿಗೆ ಮನೆ ದೊರೆತಂತಾಗಿದೆ. ಇದರಿಂದ ಬಡ ಜನರು ಸ್ವಂತ ಸೂರಿಲ್ಲದೇ ಕೊರಗುತ್ತಿದ್ದವರು ಇದೀಗ ಸ್ವಂತ ಸೂರಿಗೆ ಬಂದು ನಿಟ್ಟುಸಿರು ಬಿಟ್ಟಿದ್ದಾರೆ.ಇದೊಂದು ‘ಕ್ರೌಡ್ ಫಂಡಿಂಗ್’ ಕಾರ್ಯಕ್ರಮ. ‘ನಮ್ಮ ಈ ಕಾರ್ಯಕ್ರಮದಿಂದ ಪ್ರೇರಿತವಾಗಿ ದೇಶ, ವಿದೇಶಗಳಲ್ಲಿನ ಕೆಲ ವೇದಿಕೆಗಳು ಈ ರೀತಿಯ ಮಾದರಿಯನ್ನು ಅಳವಡಿಸಿಕೊಂಡಿವೆ’ ಎಂದು ಚಕ್ಕಲಕ್ಕಲ್ ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ.ಇವರ ಈ ಕೆಲಸ ನೂರಾರು ಮಂದಿಗೆ ಸ್ಪೂರ್ತಿ ಅಂದರೂ ತಪ್ಪಾಗಲ್ಲ.
ಪ್ರತಿಯೊಂದು ಕೆಲಸಕ್ಕೂ ಒಂದು ಪ್ರೇರಣೆ ಅಂತ ಇರುತ್ತೆ. ಒಂದು ದಿನ ಅತ್ಯಂತ ದಯನೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ 2011ರಲ್ಲಿ ಈ ಕಾರ್ಯಕ್ರಮವನ್ನು ಈ ಶಿಕ್ಷಕಿ ಆರಂಭಿಸಿದ್ದಾರೆ.ಈ ಕಾರ್ಯಕ್ಕೆ ವಿವಿಧೆಡೆಯಿಂದ ಸಕಾರಾತ್ಮಕ ಸ್ಪಂದನೆ ದೊರೆಯಿತು.ಇದು, ಈ ಯೋಜನೆಯನ್ನು ವಿಸ್ತರಿಸುವಂತೆ ಮತ್ತು ಕೆಟ್ಟ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವ ನಿರಾಶ್ರಿತ ಕುಟುಂಬಗಳಿಗೆ ನೆರವಿನ ಹಸ್ತ ಚಾಚುವಂತೆ ನಮ್ಮನ್ನು ಪ್ರೇರೇಪಿಸಿತು ಎಂದು ಅವರು ಹೇಳಿದ್ದಾರೆ.