ನ್ಯೂಸ್ ನಾಟೌಟ್: ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ(ಫೆ.1) ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ.
ಈ ಮೂಲಕ ಮೊರಾರ್ಜಿ ದೇಸಾಯಿ ಬಳಿಕ ಸತತ 6 ಬಾರಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಮಂತ್ರಿಯಾಗಿ ದಾಖಲೆ ಬರೆದಿದ್ದಾರೆ. ಅಲ್ಲದೆ, 2019ರಿಂದ ಈವರೆಗೆ ಪೂರ್ಣಾವಧಿ ವಿತ್ತ ಮಂತ್ರಿಯಾಗಿ ಕೆಲಸ ಮಾಡಿದ ದೇಶದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಸೀತಾರಾಮನ್ ಗುರುವಾರ ಬೆಳಗ್ಗೆ 11 ಗಂಟೆಗೆ ಮಧ್ಯಂತರ ಬಜೆಟ್ ಮಂಡಿಸಲು ಆರಂಭಿಸಿದ್ದು, ಮಧ್ಯಂತರ ಬಜೆಟ್ ಆಗಿರುವುದರಿಂದ ಪ್ರಮುಖ ನೀತಿ ಬದಲಾವಣೆಗಳು ಅಥವಾ ದೊಡ್ಡ ಘೋಷಣೆಗಳನ್ನು ಮಾಡುವ ಲಕ್ಷಣಗಳಿಲ್ಲ. ಚುನಾವಣಾ ವರ್ಷವಾದ್ದರಿಂದ ನಿರೀಕ್ಷೆಗಳು ಹೆಚ್ಚಿವೆ ಎನ್ನಲಾಗಿದೆ.
ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಬದಲಾವಣೆ, ಹೆಚ್ಚಿನ ಗುಣಮಟ್ಟದ ಕಡಿತ ಮಿತಿ ಮತ್ತು ಸೆಕ್ಷನ್ 80C ಮತ್ತು 80D ಅಡಿಯಲ್ಲಿ ವಿನಾಯಿತಿಗಳ ಹೆಚ್ಚಳಗಳ ಬಗ್ಗೆ ಉದ್ಯೋಗ ವಲಯದ ನಿರೀಕ್ಷೆ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಗಳ ಬಗ್ಗೆ ಹೆಚ್ಚಿನ ಒತ್ತು ಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.