ನ್ಯೂಸ್ ನಾಟೌಟ್: ಮಣ್ಣಾಗಿದ್ದ ಬಟ್ಟೆಗಳನ್ನು ಧರಿಸಿ ಹಳ್ಳಿಯ ರೈತನೊಬ್ಬ ಮೆಟ್ರೋಗೆ ಟಿಕೆಟ್ ಖರೀದಿಸಿ ಬಂದಿದ್ದ ಆದರೆ, ಈ ಬಟ್ಟೆಯಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ರೈತನಿಗೆ ಅವಮಾನ ಮಾಡಿ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಘಟನೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆದಿದೆ. ಆ ಬಳಿಕ ಕೆಲವೇ ಗಂಟೆಗಳಲ್ಲಿ ಆ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಪ್ರಯಾಣಕ್ಕೆ ಸೂಕ್ತವಲ್ಲದ ಬಟ್ಟೆಗಳನ್ನು ಕಂಡು ನಮ್ಮ ಮೆಟ್ರೋ ಭದ್ರತಾ ಸಿಬಂದಿ ರೈತನನ್ನು ತಡೆದು ಪ್ರಯಾಣಿಸಲು ಅನುಮತಿ ನೀಡಲಿಲ್ಲ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡಿದ ನಂತರ ಭದ್ರತಾ ಮೇಲ್ವಿಚಾರಕನನ್ನು ವಜಾಗೊಳಿಸಲಾಗಿದೆ. ಬಿಳಿ ಅಂಗಿ ಧರಿಸಿ ತಲೆಯ ಮೇಲೆ ಬಟ್ಟೆಯ ಮೂಟೆ ಹೊತ್ತು ಬಂದಿದ್ದ ರೈತನನ್ನು ರಾಜಾಜಿನಗರ ಮೆಟ್ರೋ ನಿಲ್ದಾಣದ ಭದ್ರತಾ ತಪಾಸಣಾ ಕೇಂದ್ರದ ಬಳಿ ಟಿಕೆಟ್ ಹೊಂದಿದ್ದರೂ ತಡೆದು ನಿಲ್ಲಿಸಲಾಯಿತು.
ಭದ್ರತಾ ಚೆಕ್ಪಾಯಿಂಟ್ನಲ್ಲಿ ಲಗೇಜ್ ಸ್ಕ್ಯಾನರ್ ಬಳಿ ಹಿಂದಿ ಮಾತನಾಡುತ್ತ ರೈತ ನಿಂತಿರುವುದು ಕಂಡುಬಂದಿದೆ. ಕಾರ್ತಿಕ್ ಸಿ ಐರಾನಿ ಎಂಬ ವ್ಯಕ್ತಿ ರೈತನ ಮೆಟ್ರೋ ಪ್ರಯಾಣವನ್ನು ತಡೆದ ಕ್ರಮದ ಬಗ್ಗೆ ಸಿಬ್ಬಂದಿಯೊಂದಿಗೆ ವಿಚಾರಿಸುತ್ತಿರುವುದು ಕಂಡಿದೆ. ಇನ್ನೊಬ್ಬರು ಭದ್ರತಾ ಸಿಬ್ಬಂದಿ ಬಳಿ ರೈತನಿಂದ ಯಾವುದೇ ಭದ್ರತಾ ಬೆದರಿಕೆ ಇಲ್ಲ ಆದರೆ, ಅವರು ಬಟ್ಟೆಗಳನ್ನು ಮಾತ್ರ ಸಾಗಿಸುತ್ತಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಯಮಗಳ ಉಲ್ಲಂಘನೆಯಲ್ಲ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ರೈತನಿಗೆ ಮೆಟ್ರೋ ಹತ್ತಲು ಅವಕಾಶ ನೀಡಲಾಯಿತು. ಘಟನೆಯ ಹಿನ್ನೆಲೆಯಲ್ಲಿ ಭದ್ರತಾ ಮೇಲ್ವಿಚಾರಕರನ್ನು ವಜಾಗೊಳಿಸಲಾಗಿದೆ.