ನ್ಯೂಸ್ ನಾಟೌಟ್: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ ಆಗಿದೆ. ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಎಮಬೆಲ್ಲ ನಿಯಮಗಳನ್ನು ಒಳಗೊಂಡಿದೆ.
ಉತ್ತರಾಖಂಡ ರಾಜ್ಯದ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರು ಎರಡನೇ ವಿವಾಹವಾಗುವುದು ಅಪರಾಧ. ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ.
ಲಿವ್ ಇನ್ ಸಂಬಂಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25ಸಾವಿರ ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದ ಆಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು.
ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್ ಇನ್ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ. ಅಸಮ್ಮತಿತ ಕ್ರಿಯೆ ವಿರೋಧಿಸಿ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ ಎಂದು ವರದಿ ತಿಳಿಸಿದೆ.