ನ್ಯೂಸ್ ನಾಟೌಟ್:ನಿಂತಿದ್ದ ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ. ಬುಲೆಟ್ ಬೈಕ್ನ ಮುಂಭಾಗ ಪೀಸ್ ಪೀಸ್ ಆಗಿದ್ದು,ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಮಿರಿಯಾಣ ಬಳಿ ಅಪಘಾತ (Road Accident) ನಡೆದಿದೆ.
ಬಿಜೆಪಿ ಮುಖಂಡ ಕೃಷ್ಣ ಲಕ್ಷ್ಮಣ (35) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.ಕೃಷ್ಣ ಲಕ್ಷ್ಮಣ ಅವರು ಚಿಂಚೊಳಿ ತಾಲೂಕಿನ ಮರಾಠ ಸಮಾಜದ ತಾಲೂಕಿನ ಅಧ್ಯಕ್ಷರಾಗಿದ್ದರು.ಮಿರಿಯಾಣ ಗ್ರಾಮದಿಂದ ತೆಲಂಗಾಣದ ತಾಂಡೂರಿಗೆ ಹೋಗುತ್ತಿದ್ದ ಸಿಮೆಂಟ್ ಲಾರಿಯು ಕೆಟ್ಟು ನಿಂತಿತ್ತು.
ಈ ಮಾರ್ಗವಾಗಿ ಬುಲೆಟ್ ಬೈಕ್ನಲ್ಲಿ ಬರುತ್ತಿದ್ದ ಕೃಷ್ಣ ಅವರಿಗೆ ರಸ್ತೆ ಬದಿ ನಿಂತಿದ್ದ ಲಾರಿ ಕಂಡಿಲ್ಲವಾದ್ದರಿಂದ ವೇಗವಾಗಿ ಬರುವಾಗ ನೇರವಾಗಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದು,ರಕ್ತಸ್ರಾವವಾಗಿ ಸ್ಥಳದಲ್ಲೇ ಕೃಷ್ಣ ಲಕ್ಷ್ಮಣ ಅವರು ಮೃತಪಟ್ಟಿದ್ದಾರೆ.ಸ್ಥಳಕ್ಕೆ ಮಿರಿಯಾಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.