ನ್ಯೂಸ್ ನಾಟೌಟ್: ವೈದ್ಯರ ನಿರ್ಲಕ್ಷ್ಯಕ್ಕೆ ಎರಡೂವರೆ ವರ್ಷದ ಗಂಡು ಮಗು ಮೃತಪಟ್ಟಿದೆ ಎಂಬ ಆರೋಪ (Medical Negligence) ಕೇಳಿ ಬಂದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಾದಾಬಾಳ್ ತಾಂಡಾ ನಿವಾಸಿ ಆಯುಷ್ (2) ಮೃತ ಮಗು ಎಂದು ತಿಳಿದು ಬಂದಿದೆ.
ಅಫಜಲಪುರ ತಾಲೂಕಿನ ಮಾದಬಾಳ ತಾಂಡದ ನಿವಾಸಿ ಶಿವಾಜಿ ರಾಠೋಡ್ ಅವರ ಮಗ ಆಯುಷ್ಗೆ ಆಶಾ ಕಾರ್ಯಕರ್ತರು ಒಟ್ಟೊಟ್ಟಿಗೆ ಲಸಿಕೆಯ ಇಂಜೆಕ್ಷನ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಮಗುವಿಗೆ ಏನಾದರೂ ರಾತ್ರಿ ಜ್ವರ ಬಂದರೆ ಔಷಧಿ ಕೊಡಿ ಎಂದು ಕಳಿಸಿದ್ದಾರೆ. ರಾತ್ರಿ ಆಗುತ್ತಿದ್ದಂತೆ ಮಗುವಿಗೆ ವಿಪರೀತ ಜ್ವರ ಕಾಣಿಸಿಕೊಂಡಿದೆ. ಜತೆಗೆ ಬಾಯಿಯಿಂದ ನೊರೆ ಕೂಡ ಬಂದಿದೆ ಎನ್ನಲಾಗಿದೆ.
ಆತಂಕಗೊಂಡ ಪೋಷಕರು ಕೂಡಲೇ ಅಫಜಲಪುರದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ಸ್ ಇಲ್ಲದೇ ಒಂದು ಗಂಟೆಗೂ ಹೆಚ್ಚು ಸಮಯ ಅಲೆದಾಡಿದ್ದಾರೆ. ಸಿಗದೇ ಇದ್ದಾಗ ನೇರವಾಗಿ ವೈದ್ಯರ ಮನೆಗೆ ಮಗುವನ್ನು ಕರೆದುಹೋಗಿದ್ದು, ಮನೆಗೆ ಬಂದಿದ್ದಕ್ಕೆ ಸಿಟ್ಟಾದ ವೈದ್ಯ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮಗುವು ಮೃತಪಟ್ಟಿತ್ತು. ಒಟ್ಟೊಟ್ಟಿಗೆ ಇಂಜೆಕ್ಷನ್ ಕೊಟ್ಟಿದ್ದು ಹಾಗೂ ಆಸ್ಪತ್ರೆಗೆ ಬಂದಾಗ ವೈದ್ಯರು ಇಲ್ಲದೇ ಸೂಕ್ತ ಚಿಕಿತ್ಸೆ ಸಿಗದ ಕಾರಣಕ್ಕೆ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.