ನ್ಯೂಸ್ ನಾಟೌಟ್: ಸಂಬಂಧದಲ್ಲಿ ಅಣ್ಣ – ತಂಗಿ ಆಗಿದ್ದು ಪ್ರೀತಿಯ ಬಲೆಗೆ ಬಿದ್ರೆ ಎಂಥವರಾದ್ರೂ ಬುದ್ದಿವಾದ ಹೇಳೋದು ಸಹಜ.ಹೀಗೆ ಅವರಿಬ್ಬರಿಗೆ ಬೈದು ಬುದ್ದಿವಾದ ಹೇಳಿ ತಂಗಿಯನ್ನು ಬೇರೆಡೆ ಮದುವೆ ಮಾಡಿಕೊಡಲು ಮುಂದಾದ ಸಂಬಂಧಿಕರಿಗೆ ಶಾಕ್ ಆಗಿದೆ.ಬುದ್ಧಿವಾದ ಹೇಳಿದ್ದರೂ ಕೂಡ ಅಣ್ಣ-ತಂಗಿ ಸಂಬಂಧವನ್ನೂ ಮೀರಿ ಇವರಿಬ್ಬರ ಪ್ರೀತಿಯೇ ಹೆಚ್ಚಾಗಿದ್ದರಿಂದ ಇಬ್ಬರೂ ಮನೆಯಿಂದ ಓಡಿಹೋಗಿ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರೆ. ನಂತರ ನಾವಿಬ್ಬರೂ ಜೀವನ ಮಾಡುವುದಕ್ಕೆ ಜನರು ಬಿಡುವುದಿಲ್ಲ ಎಂದರಿತು ಇಬ್ಬರೂ ಜೀವನವನ್ನೇ ಕತ್ತಲಾಗಿಸಿದ್ದಾರೆ.
ಈ ದುರ್ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ.ಉಸಿರು ಚೆಲ್ಲಿದವರನ್ನು ಶಶಿಕಲಾ (20) ಹಾಗೂ ಗೊಲ್ಲಾಳಪ್ಪ (24) ಎಂದು ಹೇಳಲಾಗುತ್ತಿದೆ.ಶಶಿಕಲಾ ಹಾಗೂ ಮೃತ ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲೆ ಅಣ್ಣ ತಂಗಿ ಆಗಬೇಕು.ಅಣ್ಣ ತಂಗಿಯ ಪ್ರೀತಿಗೆ ಮನೆಯವರು ನಿರಾಕರಣೆ ಮಾಡಿದ್ದಾರೆ.ಇನ್ನು ಅಣ್ಣ-ತಂಗಿ ಆಗಿದ್ದರೂ ಪ್ರೀತಿಸಿ ಮದುವೆಯಾದರೆ ಇಡೀ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಭಾವಿಸಿ ಶಶಿಕಲಾಳನ್ನು ಮದುವೆ ಮಾಡಿಕೊಡಲು ಮುಂದಾಗಿದ್ದಾರೆ.
ಯುವತಿಯ ಕುಟುಂಬಸ್ಥರು ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿದ್ದರು.ಮುಂದಿನ ತಿಂಗಳು ಶಶಿಕಲಾ ಮದುವೆ ಕೂಡ ನಿಶ್ಚಯವಾಗಿತ್ತು.ಮದುವೆ ನಿಶ್ಚಯವಾದ ಹಿನ್ನಲೆಯಲ್ಲಿ ಆಕೆಯ ಪ್ರಿಯತಮ ಗೊಲ್ಲಾಳಪ್ಪ ನಿನ್ನೆ ರಾತ್ರಿ ಮನೆಯಿಂದ ಶಶಿಕಲಾಳನ್ನು ಕರೆದೊಯ್ದು ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಬಳಿಕ ಮಾಗಣಪುರ ಗ್ರಾಮದ ಹೊರವಲಯದ ತೋಟದ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಪ್ರೇಮಿಗಳು ನೇಣಿಗೆ ಶರಣಾಗುವುದಕ್ಕೂ ಮುನ್ನ ಮದುವೆಯಾಗಿರುವ ಕುರಿತು ಸೆಲ್ಫಿ ಪೋಟೊ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ್ದು, ತಮ್ಮ ಸ್ನೇಹಿತರಿಗೂ ಕಳುಹಿಸಿದ್ದಾರೆ. ಈ ಘಟನೆ ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳ ಭೇಟಿ ಮಾಡಿ, ಪರಿಶೀಲನೆ ಮಾಡಿದ್ದಾರೆ. ಪ್ರೇಮಿಗಳ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.