ನ್ಯೂಸ್ ನಾಟೌಟ್: ಸುಳ್ಯದ ಗ್ರಾಮೀಣ ಪ್ರತಿಭೆ, ನ್ಯೂಸ್ ನಾಟೌಟ್ ಗುರುತಿಸಿದ ಯುವ ಕೊಳಲುವಾದಕ ವೀಕ್ಷಿತ್ ಗೌಡ ಕುತ್ಯಾಲ ಅವರು ಜೆಸಿಐ ಸುಳ್ಯ ಪಯಸ್ವಿನಿ ನೀಡುವ 2024ರ ಯುವ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕುತ್ಯಾಲದ ಗೋಪಾಲಕೃಷ್ಣ ಮತ್ತು ಸುಶೀಲಾ ದಂಪತಿಯ ಪುತ್ರ.
ಬಾಲ್ಯದಿಂದಲೇ ಸಂಗೀತದ ಬಗ್ಗೆ ಅತಿಯಾದ ಒಲವು ಹೊಂದಿದ್ದ ವೀಕ್ಷಿತ್ ಗೌಡ ಕುತ್ಯಾಲ ಅವರಿಗೆ ತಾನು ಕೂಡ ಓರ್ವ ಉತ್ತಮ ಸಂಗೀತಕಾರನಾಗಬೇಕು ಎಂಬ ಹಂಬಲವಿತ್ತು. ಅಲ್ಲದೇ ಕೊಳಲು ನುಡಿಸುವ ಬಗ್ಗೆ ತರಬೇತಿ ಪಡೆದು ಉತ್ತಮ ಕೊಳಲುವಾದಕನಾಗಿದ್ದರೂ ಎಲೆಮರೆಯ ಕಾಯಿಯಂತಿದ್ದರು. 2018ರಲ್ಲಿ ಕೊಳಲುವಾದನ ಜರ್ನಿ ಆರಂಭಗೊಂಡಿತ್ತು. ಇವರ ಪ್ರತಿಭೆಯ ಬಗ್ಗೆ ನ್ಯೂಸ್ ನಾಟೌಟ್ ಕನ್ನಡ ಡಿಜಿಟಲ್ ಮಾಧ್ಯಮ ವಿಡಿಯೋ ವರದಿ ಪ್ರಕಟಿಸಿತ್ತು. ಈ ವಿಡಿಯೋವನ್ನು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ವೀಕ್ಷಿತ್ ಗೌಡ ಕುತ್ಯಾಲ ಅವರು ಕರ್ನಾಟಕ, ಕೇರಳ ಸೇರಿದಂತೆ ಸುಳ್ಯ, ಪುತ್ತೂರು, ಸುಬ್ರಹ್ಮಣ್ಯ, ಮಂಗಳೂರು, ಬಂಟ್ವಾಳ, ಉಜಿರೆ, ಬೆಳ್ತಂಗಡಿ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ, ಮಡಿಕೇರಿ, ಕುಶಾಲನಗರ, ಹಾಸನ, ಕಾಸರಗೋಡು ಜಿಲ್ಲೆಯಲ್ಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಡಿಪ್ಲೋಮಾ ಶಿಕ್ಷಣ ಪಡೆದಿರುವ ವೀಕ್ಷಿತ್ ಗೌಡ ಕುತ್ಯಾಲ ಇವರು ಪ್ರಸ್ತುತ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್ ಮೈಂಟೆನೆನ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆ.23ರಂದು ಸಾಯಂಕಾಲ 6.30ಕ್ಕೆ ಸುಳ್ಯದ ಅಂಬಟಅಡ್ಕ ಜೇಸಿ ಭವನ (ಗಿರಿದರ್ಶಿನಿ ಕಲಾಮಂದಿರದ ಬಳಿ) ದಲ್ಲಿ ಆಯೋಜಿಸಲಾಗಿದೆ. ಈ ಸಂದರ್ಭ ಜೆಸಿಐ ಸುಳ್ಯ ಪಯಸ್ವಿನಿ ಇದರ ಮಾಸಿಕ ಸಭೆ ಮತ್ತು ನೂತನ ಪದಾಧಿಕಾರಿಗಳಿಗೆ LDMT ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ವಲಯ15ರ ವಲಯ ಉಪಾಧ್ಯಕ್ಷ ಜೇಸಿ JFM ಅಭಿಷೇಕ್ ಅವರಿಗೆ ಗೌರವಾರ್ಪಣೆ ಮಾಡಲಾಗುವುದು. ನೂತನ ಪದಾಧಿಕಾರಿಗಳಿಗೆ ವಲಯ ಉಪಾಧ್ಯಕ್ಷ ಜೇಸಿ JFM ಅಭಿಷೇಕ್ LDMT ಕಾರ್ಯಕ್ರಮ ನೆರವರಿಸಲಿದ್ದಾರೆ ಎಂದು ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಜೇಸಿ ಗುರುಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.