ನ್ಯೂಸ್ ನಾಟೌಟ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾಗೆ ಸೇರಿದ್ದ 27 ಕೆ.ಜಿ. ಚಿನ್ನ ಮತ್ತು ವಜ್ರದ ಆಭರಣಗಳನ್ನು ಮಾರ್ಚ್ 6 ಮತ್ತು 7ರಂದು ತಮಿಳುನಾಡು ಸರ್ಕಾರದ ಗೃಹ ಕಾರ್ಯದರ್ಶಿಯವರಿಗೆ ಹಸ್ತಾಂತರಿಸುವುದಾಗಿ ಬೆಂಗಳೂರಿನ 36ನೇ ಸಿಟಿ ಸಿವಿಲ್ ನ್ಯಾಯಾಲಯ ಸೋಮವಾರ(ಫೆ.20) ಪ್ರಕಟಿಸಿದೆ.
ಜಯಲಲಿತಾಗೆ ವಿಧಿಸಿದ್ದ 100 ಕೋಟಿ ರೂಪಾಯಿ ದಂಡವನ್ನು ವಸೂಲಿ ಮಾಡಿಕೊಳ್ಳುವ ಸಲುವಾಗಿ ಅವರ ಆಸ್ತಿಗಳನ್ನು ಕ್ರೋಢೀಕರಿಸುವ ಅಂತಿಮ ನ್ಯಾಯಾಂಗ ಪ್ರಕ್ರಿಯೆಯ ಆರಂಭದ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜಯಲಲಿತಾಗೆ ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಿದ 10 ವರ್ಷಗಳ ಬಳಿಕ ಮತ್ತು ಜಯಲಲಿತಾ ಸಾವಿನ ಏಳು ವರ್ಷಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ನ್ಯಾಯಾಲಯದ ಪ್ರಸ್ತುತ ಕಲಾಪಗಳಡಿ ಜಯಲಲಿತಾಗೆ ಸೇರಿದ ಎಲ್ಲ ಸ್ಥಿರ ಮತ್ತು ಚರ ಆಸ್ತಿಗಳನ್ನು ಹರಾಜು ಮಾಡಲಾಗುತ್ತದೆ. ಈ ದಂಡದ ಮೊತ್ತವನ್ನು ವಸೂಲಿ ಮಾಡಿಕೊಳ್ಳುವ ಸಲುವಾಗಿ 20 ಕೆ.ಜಿ. ಚಿನ್ನಾಭರಣಗಳನ್ನು ಮಾರಾಟ ಮಾಡಲಾಗುತ್ತದೆ ಹಾಗೂ ತಾಯಿಯಿಂದ ಬಂದದ್ದು ಎನ್ನಲಾದ ಏಳು ಕೆ.ಜಿ. ಚಿನ್ನಕ್ಕೆ ವಿನಾಯ್ತಿ ನೀಡಲಾಗಿದೆ. ಇದರ ಅಂಗವಾಗಿ ಜಯಲಲಿತಾ ತಮ್ಮ ಖಾತೆ ಹೊಂದಿದ್ದ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್, ವಿಶೇಷ ನ್ಯಾಯಾಲಯಕ್ಕೆ ಸೋಮವಾರ 60 ಲಕ್ಷ ರೂಪಾಯಿಗಳನ್ನು ಹಸ್ತಾಂತರಿಸಿದೆ.
ರಾಜ್ಯದ ಗೃಹ ಕಾರ್ಯದರ್ಶಿ ಮತ್ತು ವಿಚಕ್ಷಣೆ ಹಾಗೂ ಭ್ರಷ್ಟಾಚಾರ ತಡೆ ನಿರ್ದೇಶನಾಲಯದ ಪೊಲೀಸ್ ಮಹಾನಿರೀಕ್ಷಕರು ಬೆಂಗಳೂರು ನ್ಯಾಯಾಲಯಕ್ಕೆ ತೆರಳಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ನ್ಯಾಯಾಲಯದಿಂದ ಸ್ವೀಕರಿಸುವ ಬಗ್ಗೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಮೋಹನ್ ಅವರು ಈ ಸಂಬಂಧ ತೀರ್ಪು ನೀಡಿದ್ದಾರೆ.