ನ್ಯೂಸ್ ನಾಟೌಟ್ : ಇತ್ತೀಚೆಗೆ ಭಾರತದ 8 ಜನ ನೌಕಾಪಡೆಯ ಮಾಜಿ ಸಯನಿಕರು ಸರ್ಕಾರದ ಸಹಾಯದಿಂದ ತವರಿಗೆ ಮರಳಿದ್ದನ್ನು ಕೇಳಿದ್ದೇವೆ. ಆದರೆ, ಇಲ್ಲಿ ನಮ್ಮ ನೆರೆಯ ರಾಜ್ಯ ತೆಲಂಗಾಣದಲ್ಲೂ ಅಂತಹದ್ದೊಂದು ಪ್ರಕರಣ ವರದಿಯಾಗಿದೆ.
ಕೊಲೆ ಪ್ರಕರಣವೊಂದರಲ್ಲಿ ದುಬೈನಲ್ಲಿ ಕಳೆದ 18 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ಸ್ವದೇಶಕ್ಕೆ ಮರಳಿ ಕುಟುಂಬದವರನ್ನು ಭೇಟಿಯಾಗಿರುವ ಭಾವುಕ ಕ್ಷಣಕ್ಕೆ ಬುಧವಾರ(ಫೆ.21 ರಂದು) ಹೈದರಾಬಾದ್ ವಿಮಾನ ನಿಲ್ದಾಣ ಸಾಕ್ಷಿಯಾಯಿತು. ದುಬೈನಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಸಿರ್ಸಿಲ್ಲ ಜಿಲ್ಲೆಯ ಶಿವರಾತ್ರಿ ಮಲ್ಲೇಶ್, ಶಿವರಾತ್ರಿ ರವಿ, ಗೊಲ್ಲೆಂ ನಾಂಪಲ್ಲಿ, ದುಂದುಗುಲ ಲಕ್ಷ್ಮಣ್ ಮತ್ತು ಶಿವರಾತ್ರಿ ಹನುಮಂತು ಎಂಬವರು ನೇಪಾಳಿ ಪ್ರಜೆಯೊಬ್ಬರ ಸಾವಿನ ಪ್ರಕರಣದಲ್ಲಿ ದುಬೈ ಜೈಲಿನಲ್ಲಿ ಶಿಕ್ಷೆಗೆ ಒಳಗಾಗಿದ್ದರು.
ಅಕ್ಟೋಬರ್ 28, 2005, ವಿಸಿಟ್ ವೀಸಾದಲ್ಲಿ ಹನುಮಂತ್ ದುಬೈಗೆ ಹೋಗಿದ್ದರು. ಎರಡು ತಿಂಗಳು ಕೆಲಸ ಮಾಡಿದ ನಂತರ ಸ್ಥಳೀಯ ಪೊಲೀಸರು ಹನುಮಂತ್ ನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದರು.
ಈ ಪ್ರಕರಣದಲ್ಲಿ ಒಟ್ಟು 10 ಜನರನ್ನು ಆರೋಪಿಗಳಾಗಿ ಬಂಧಿಸಲಾಗಿತ್ತು. ಇದರಲ್ಲಿ ಐವರು ತೆಲಂಗಾಣ ಮೂಲದವರು ಆಗಿದ್ದರು. ಪ್ರಕರಣ ಸಂಬಂಧ 25 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಗಿತ್ತು. ದುಬೈ ಕಾನೂನಿನ ಪ್ರಕಾರ ಮೃತರ ಕುಟುಂಬದ ಸದಸ್ಯರ ಬಳಿ ಕ್ಷಮೆಯಾಚಿಸಿ ಅವರು ಕ್ಷಮಿಸಿದರೆ ಅಪರಾಧಿಗಳನ್ನು ಬಿಡುಗಡೆ ಮಾಡಬಹುದಾಗಿದೆ. ಅದರಂತೆ ಅಪರಾಧಿಗಳ ಬಿಡುಗಡೆಗಾಗಿ 2011 ರಲ್ಲಿ 2011ರಲ್ಲಿ ಶಾಸಕ ಕೆಟಿಆರ್ ಅವರು ನೇಪಾಳದಲ್ಲಿ ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ 15 ಲಕ್ಷ ರೂ. ಚೆಕ್ ನ್ನು ನೀಡಿದ್ದರು.
ಕಳೆದ ವರ್ಷ ಐವರ ಕ್ಷಮಾದಾನ ಅರ್ಜಿಯನ್ನು ಅಂಗೀಕರಿಸುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರವನ್ನು ಕೆಟಿಆರ್ ಒತ್ತಾಯಿಸಿದರು. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಅಂತಿಮವಾಗಿ ದುಬೈ ನ್ಯಾಯಾಲಯ ಕ್ಷಮಾದಾನ ನೀಡಿದ ಬಳಿಕ ಐವರನ್ನು ಬಿಡುಗಡೆ ಮಾಡಲಾಯಿತು. ಐವರು ತವರಿಗೆ ವಾಪಾಸ್ ಆಗಲು ಸ್ವತಃ ಕೆಟಿಆರ್ ಅವರೇ ಟಿಕೆಟ್ ಬುಕ್ ಮಾಡಿ ವಿಮಾನದ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.