ನ್ಯೂಸ್ ನಾಟೌಟ್: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಬ್ಬರೂ ಬೇರೆ ಬೇರೆ ಜಿಲ್ಲೆಯಲ್ಲಿದ್ದಾರೆ. ಇದರಿಂದ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ಪೊಲೀಸ್ ಸಿಬ್ಬಂದಿ ದಯಾಮರಣ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)ಗೆ ಮತ್ತು ರಾಷ್ಟ್ರಪತಿಗಳಿಗೆ (President) ಪತ್ರ ಬರೆದ ಘಟನೆ ನಡೆದಿದೆ.
ಪತಿ ಒಂದು ಜಿಲ್ಲೆಯಲ್ಲಿ ವಾಸ, ಪತಿ ಒಂದು ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದ ಗಂಡ-ಹೆಂಡತಿ ಜೊತೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ವಿಚ್ಛೇದನ ಪ್ರಕರಣ ಕೂಡ ಹೆಚ್ಚುತ್ತಿವೆ. ಕೆಲ ಸಿಬ್ಬಂದಿ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಬೇಕಿದೆ. ಹೀಗಾಗಿ ವರ್ಗಾವಣೆ ಕೋರಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಗೃಹ ಇಲಾಖೆ ಮಂತ್ರಿಗಳು ಬಾಯಿ ಮಾತಿನಲ್ಲಿ ವರ್ಗಾವಣೆ ಮಾಡುತ್ತೇವೆ ಅಂತ ಹೇಳುತ್ತಾರೆ.
ಆದರೆ ಅಂತರ ಜಿಲ್ಲಾ ವರ್ಗಾವಣೆ ಲಿಖಿತ ರೂಪದಲ್ಲಿ ಬರುತ್ತಿಲ್ಲ ಎಂದು ರಾಜ್ಯದ ಹಲವು ಠಾಣೆಗಳಲ್ಲಿನ ಸಿಬ್ಬಂದಿ ಪತ್ರ ಬರೆದಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಮತ್ತು ಕೆಸಿಎಸ್ಆರ್ ನಿಯಮದ ಪ್ರಕಾರ ಪತಿ-ಪತ್ನಿ ಒಂದೆ ಘಟಕ ಹಾಗೂ ಒಂದೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯಮ ಇದ್ದರು ಕೂಡ ಕಳೆದ 3 ವರ್ಷಗಳಿಂದ ಮಾನ್ಯ ಕರ್ನಾಟಕ ಸರ್ಕಾರವಾಗಲಿ, ರಾಜ್ಯ ಗೃಹ ಸಚಿವರಾಗಲಿ, ಪೊಲೀಸ್ ಮುಖ್ಯಸ್ಥರಾಗಲಿ ಯಾವುದೆ ವರ್ಗಾವಣೆ ಮಾಡುತ್ತಿಲ್ಲ.
ಈ ವಿಚಾರವಾಗಿ ಸುಮಾರು 3 ವರ್ಷಗಳಿಂದ ಮಾನ್ಯ ಗೃಹ ಸಚಿವರಿಗೆ ಪತಿ-ಪತ್ನಿ ಪ್ರಕರಣದಲ್ಲಿ ಅಂತರ್ ಜಿಲ್ಲಾ ವರ್ಗಾವಣೆ ಮಾಡುವಂತೆ ಆನೇಕ ಬಾರಿ ಮನವಿ ಸಲ್ಲಿಸಿದ್ದು, ಈ ವಿಚಾರವಾಗಿ ಶೀಘ್ರದಲ್ಲೇ ವರ್ಗಾವಣೆ ಮಾಡುತ್ತೇವೆ ಅಂತ ಮಾಧ್ಯಮಗಳ ಮುಂದೆ 3 ವರ್ಷಗಳಿಂದ ಹೇಳಿಕೆ ನೀಡಿರುತ್ತಾರೆ ವಿನಃ ಯಾವುದೆ ವರ್ಗಾವಣೆ ಮಾಡುತ್ತಿಲ್ಲ ಎಮದು ಆರೋಪಿಸಿದ್ದಾರೆ.
ನಾವುಗಳು 10 ರಿಂದ 15 ವರ್ಷಗಳ ಕಾಲ ತಂದೆ ತಾಯಿ ಹೆಂಡತಿ ಮಕ್ಕಳನ್ನು ಬಿಟ್ಟು, ನಾವು ಒಂದು ಕಡೆ, ಹೆಂಡತಿ ಒಂದು ಕಡೆ ನೌಕರಿ ಮಾಡುತ್ತಾ ಹೆತ್ತ ಮಕ್ಕಳ ಲಾಲನೆ ಪಾಲನೆ ಮಾಡದೆ ಜನ್ಮ ಕೊಟ್ಟ ಅಪ್ಪ ಅಮ್ಮ ಇವರ ಪೋಷಣೆ ಮಾಡಲಾಗದೆ ಜೀವನ ನಡೆಸುವಂತಾಗಿದೆ. ನಮಗೆ ವರ್ಗಾವಣೆ ಆಗದೆ ಇರುವುದಕ್ಕೆ ದಾಂಪತ್ಯದಲ್ಲಿ ಬಿರುಕು ಬಿಟ್ಟು ಎಷ್ಟೋ ಸಂಸಾರಗಳು ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿವೆ. ಕೆಲವು ವಿಚ್ಛೇದನ ಕೊಟ್ಟಾಗಿದೆ. ಇನ್ನು ಕೆಲವರಲ್ಲಿ ಪತಿ-ಪತ್ನಿ ಯಾರು ಬೇರೆ ಬೇರೆ ಇರುವುದರಿಂದ ಮದುವೆಯಾಗಿ 5 ವರ್ಷ ಕಳೆದರೂ ಇನ್ನು ಕೂಡ ಮಕ್ಕಳು ಆಗುತ್ತಿಲ್ಲ.
ನಮ್ಮದು ಶಿಸ್ತಿನ ಇಲಾಖೆ ಹಾಗಾಗಿ ಬೇರೆ ಇಲಾಖೆಯವರಂತೆ ಪ್ರತಿಭಟನೆ ಮಾಡಲು ಅವಕಾಶ ವಿರುವುದಿಲ್ಲ. ಬೇರೆ ಇಲಾಖೆಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆ ನಡೆದಿದೆ. ಆದರೆ ಪೊಲೀಸ್ ಇಲಾಖೆಯಲ್ಲಿ 2021 ರಿಂದ ಯಾವುದೆ ವರ್ಗಾವಣೆ ಆಗಿರುವುದಿಲ್ಲ. ಆದ ಕಾರಣ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವವಹಿಸಲು ಆಗುತ್ತಿಲ್ಲ. ನಮಗೆ ನೆಮ್ಮದಿ ಅನ್ನೋದು ಹಾಳಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗಿವೆ. ಆದ ಕಾರಣ ದಯಾಳುಗಳಾದ ತಾವುಗಳು ನಮಗೆ ಸಾಮೂಹಿಕ ಮರಣ ಪಡೆಯಲು ದಯಾಮಾಡಿ ದಯಾಮರಣ ಕಲ್ಪಿಸಿಕೊಂಡಬೇಕೆಂದು ನೊಂದ ಮನಸ್ಸಿನಿಂದ ಈ ಮೂಲಕ ಕಳಕಳಿಯಿಂದ ಬೇಡಿಕೊಳ್ಳುತ್ತೇವೆ”. ಎಂದು ಪೊಲೀಸ್ ಸಿಬ್ಬಂದಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.