ನ್ಯೂಸ್ ನಾಟೌಟ್: ಒಟ್ಟು 8 ಇಂದಿರಾ ಕ್ಯಾಂಟೀನ್ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಸರ್ಕಾರದಿಂದ 3.38 ಕೋಟಿ ರೂಪಾಯಿ ಬಿಲ್ ಬಾಕಿ ಇರುವುದರಿಂದ ನಿರ್ವಹಣೆ ಸಾಧ್ಯವಾಗದೆ ಬಳ್ಳಾರಿಯ ಕ್ಯಾಂಟೀನ್ಗಳು ಮುಚ್ಚಿವೆ ಎನ್ನಲಾಗಿದೆ.
ಬಾಕಿ ಇರುವ ಬಿಲ್ ಪಾವತಿ ಮಾಡದ ಕಾರಣ ಬಳ್ಳಾರಿ ಜಿಲ್ಲೆಯಾದ್ಯಂತ 8 ಇಂದಿರಾ ಕ್ಯಾಂಟೀನ್ಗಳು (Indira Canteen) ಬಂದ್ ಆಗಿವೆ ಎಂದು ವರದಿ ತಿಳಿಸಿದೆ.
ಬಳ್ಳಾರಿ ನಗರದ ಜಿಲ್ಲಾಸ್ಪತ್ರೆ, ವಿಮ್ಸ್, ಮೋತಿ ವೃತ್ತ, ಎಪಿಎಂಸಿ ಆವರಣದ ಕ್ಯಾಂಟೀನ್ಗಳು ಮುಚ್ಚಿವೆ. ಬಳ್ಳಾರಿ ನಗರವೊಂದರಲ್ಲೇ ಸರ್ಕಾರ 3.38 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. 2021 ರಿಂದಲೇ ಕೋಟಿ ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ.
ಖಾಸಗಿ ಏಜೆನ್ಸಿ ಮೂಲಕ ಇಂದಿರಾ ಕ್ಯಾಂಟೀನ್ಗಳನ್ನು ನಡೆಸಲಾಗುತ್ತಿದೆ. ಇದೀಗ, ಬಿಲ್ ಬಿಡುಗಡೆಯಾಗದ ಕಾರಣ ಕ್ಯಾಂಟೀನ್ ನಡೆಸುವುದು ಕಷ್ಟ ಎಂದು ಖಾಸಗಿ ಏಜೆನ್ಸಿಗಳು ಅವುಗಳನ್ನು ಮುಚ್ಚಿವೆ. ರೇಷನ್, ತರಕಾರಿ, ಗ್ಯಾಸ್, ಸಿಬ್ಬಂದಿ ಸಂಬಳಕ್ಕೂ ಹಣ ಇಲ್ಲದೆ ಕ್ಯಾಂಟೀನ್ಗಳನ್ನು ಬಂದ್ ಮಾಡಲಾಗಿದೆ ಎಂದು ಖಾಸಗಿ ಏಜೆನ್ಸಿಗಳು ತಿಳಿಸಿವೆ.
ಇದೀಗ ಕ್ಯಾಂಟೀನ್ಗಳು ಮುಚ್ಚಿರುವುದರಿಂದ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ದೂರಲಾಗುತ್ತಿದೆ.
ಜನವರಿ 20 ರಿಂದ ಕ್ಯಾಂಟೀನ್ಗಳು ಮುಚ್ಚಿವೆ. ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ, ಸರ್ಕಾರಕ್ಕೆ ನಿರ್ವಹಣೆ ಏಜನ್ಸಿಯಿಂದ ಪತ್ರ ಬರೆಯಲಾಗಿದೆ. ಆದಾಗ್ಯೂ ಖಾಸಗಿ ಏಜೆನ್ಸಿ ಮನವಿಗೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಬೇಸರದಿಂದ ಕ್ಯಾಟೀನ್ ಸೇವೆ ಸ್ಥಗಿತ ಮಾಡುತ್ತಿದ್ದೇವೆ ಎಂದು ಏಜೆನ್ಸಿಯು ಪಾಲಿಕೆಗೆ ಪತ್ರ ಬರೆದಿದೆ.