ನ್ಯೂಸ್ ನಾಟೌಟ್: ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಅಮೆರಿಕದ ಓಹಿಯೊದ ಸಿನ್ಸಿನಾಟಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶ್ರೇಯಸ್ ರೆಡ್ಡಿ ಎಂದು ಗುರುತಿಸಲಾಗಿದೆ. ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ ಮತ್ತು ಇದು ಕಳೆದ ಒಂದು ವಾರದಲ್ಲಿ ಇಂಥ ಮೂರನೇ ಪ್ರಕರಣ ಎಂದು ವರದಿ ತಿಳಿಸಿದೆ.
ಈತ ರೆಡ್ಡಿ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್ ವಿದ್ಯಾರ್ಥಿಯಾಗಿದ್ದು, ಸಾವಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎನ್ನಲಾಗಿದೆ.
ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ನ್ಯೂಯಾರ್ಕ್ ನಲ್ಲಿರುವ ಭಾರತೀಯ ಕಾನ್ಸುಲೇಟ್, ಮೃತ ವಿದ್ಯಾರ್ಥಿಯ ಕುಟುಂಬದ ಜತೆ ಸಂಪರ್ಕದಲ್ಲಿದ್ದು, ಸಾಧ್ಯವಾದ ಎಲ್ಲ ನೆರವನ್ನೂ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದೆ.
“ಓಹಿಯೊದಲ್ಲಿದ್ದ ಭಾರತ ಮೂಲದ ಶ್ರೇಯಸ್ ರೆಡ್ಡಿಯವರ ಅಕಾಲಿಕ ಸಾವಿನಿಂದ ನಮಗೆ ತೀವ್ರ ಬೇಸರವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ಸಂದೇಹ ಇಲ್ಲ. ಶ್ರೇಯಸ್ ಕುಟುಂಬದ ಜತೆ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯವಾದ ಎಲ್ಲ ನೆರವನ್ನು ನೀಡುತ್ತಿದ್ದೇವೆ” ಎಂದು ನ್ಯೂಯಾರ್ಕ್ ನಲ್ಲಿರುವ ಭಾರತ ಕಾನ್ಸುಲೇಟ್ ಪೋಸ್ಟ್ ಮಾಡಿದೆ.
ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ. ಆದರೆ ವಿವೇಕ್ ಸೈನಿ ಹಾಗೂ ನೀಲ್ ಆಚಾರ್ಯ ಎಂಬ ಇಬ್ಬರು ಇದಕ್ಕೂ ಮುನ್ನ ಈ ವಾರದಲ್ಲಿ ಸಾವಿಗೀಡಾಗಿದ್ದರು.