ನ್ಯೂಸ್ ನಾಟೌಟ್: ಕತಾರ್ ನಲ್ಲಿ ಗ* ಲ್ಲು ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಂದಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಸೋಮವಾರ(ಫೆ.12) ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಭಾರತ ಸರ್ಕಾರದ ಮಧ್ಯಪ್ರವೇಶದ ಬಳಿಕ ಈ ಎಂಟು ಮಂದಿಯ ಮರಣ ದಂಡನೆಯನ್ನು ಸುಧೀರ್ಘ ಅವಧಿಯ ಕಾರಾಗೃಹ ಶಿಕ್ಷೆಯಾಗಿ ಪರಿವರ್ತಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಕತಾರ್ ನಲ್ಲಿ ದಹ್ರಾ ಗ್ಲೋಬಲ್ ಪರವಾಗಿ ಗೂಢಚಾರಿಕೆ ಕಾರ್ಯ ನಿರ್ವಹಿಸುತ್ತಿದ್ದ ಈ ಎಂಟು ಮಂದಿಯನ್ನು ಬಿಡುಗಡೆ ಮಾಡಿದ ಅಲ್ಲಿನ ಸರ್ಕಾರಕ್ಕೆ ಭಾರತ ಕೃತಜ್ಞತೆ ಸಲ್ಲಿಸಿದೆ. ಈ ಪೈಕಿ ಏಳು ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ವ್ಯಕ್ತಿಗಳು ಭಾರತಕ್ಕೆ ಮರಳಲು ಅನುವಾಗುವಂತೆ ಕತಾರ್ ನ ಅಮೀರ್ ಕೈಗೊಂಡ ನಿರ್ಧಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶ್ಲಾಘಿಸಿದೆ. ದೇಶದ ಸಬ್ಮೆರಿನ್ ಯೋಜನೆಯ ಬಗ್ಗೆ ಗೂಢಚರ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಈ ಎಂಟು ಮಂದಿಯನ್ನು 2022ರ ಅಕ್ಟೋಬರ್ ನಲ್ಲಿ ಕತಾರ್ ನಲ್ಲಿ ಬಂಧಿಸಲಾಗಿತ್ತು. ಕತಾರ್ ನ್ಯಾಯಾಲಯ ಇವರಿಗೆ ಗ *ಲ್ಲು ಶಿಕ್ಷೆ ವಿಧಿಸಿತ್ತು.
ಆದರೆ ಕೊನೆಗೆ ಇದನ್ನು ಸುಧೀರ್ಘ ಅವಧಿಯ ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಗಿತ್ತು ಎಂದು ವರದಿ ತಿಳಿಸಿದೆ. ನೌಕಾಪಡೆಯ ಈ ನಿವೃತ್ತ ಅಧಿಕಾರಿಗಳ ಬಿಡುಗಡೆ ಮತ್ತು ಅವರು ಭಾರತಕ್ಕೆ ಮರಳಲು ಅನುಕೂಲ ಮಾಡಿಕೊಡುವಂತೆ ಈ ಅಧಿಕಾರಿಗಳ ಕುಟುಂಬಗಳು ನಿರಂತರವಾಗಿ ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಿ, ಕಾನೂನು ನೆರವು ನೀಡುವ ಭರವಸೆ ಕೊಟ್ಟಿತ್ತು. ಸೋಮವಾರ ಎಂಟು ಮಂದಿಯ ಪೈಕಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.