ನ್ಯೂಸ್ ನಾಟೌಟ್: ಒಂದೊಂದು ಸಲ ಹಾವು ಕಡಿತಕ್ಕೆ ಒಳಗಾದವರು ಏನು ಮಾಡಬೇಕೆಂದು ತೋಚದೇ ಕಂಗಾಲಾಗುತ್ತಾರೆ. ಕೆಲವರು ಇದಕ್ಕೆ ಆಸ್ಪತ್ರೆ ಔಷಧಿಗಿಂತಲೂ ನಾಟಿ ಔಷಧಿ ಒಳ್ಳೆಯದು ಎಂದು ಅಭಿಪ್ರಾಯ ಪಡುತ್ತಾರೆ.ಇದರಿಂದ ಅನೇಕರು ಗೊಂದಲಕ್ಕೆ ಒಳಗಾಗುತ್ತಾರೆ.ಆದರೆ ಇದಕ್ಕೆ ತಕ್ಷಣವೇ ಔಷಧಿ ಮಾಡೋದು ಉತ್ತಮ.ಇದೀಗ ಹಾವು ಕಡಿತಕ್ಕೆ ಒಂಟೆಯ ಕಣ್ಣೀರು ಮದ್ದು ಅನ್ನೋದರ ಬಗ್ಗೆ ನಿಮ್ಗೆ ಗೊತ್ತಿದೆಯಾ? ಹೌದು, ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗುತ್ತಿರಬಹುದಲ್ವ? ಈ ಸುದ್ದಿ ನಿಜ. ಒಂಟೆಯ ಕಣ್ಣೀರಿನಲ್ಲಿ ಇರುವ ರಾಸಾಯನಿಕಗಳು ಹಾವಿನ ವಿಷಕ್ಕೆ ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಇತ್ತೀಚಿನ ಸಂಶೋಧನೆಗಳು ಬಹಿರಂಗಪಡಿಸಿವೆ..!
ನಿಮ್ಗೆ ಗೊತ್ತಿರೋ ಹಾಗೆ ಹಾವುಗಳಲ್ಲಿ ಎರಡು ಬಗೆ ಇದೆ. ಒಂದು ವಿಷಕಾರಿ ಹಾವುಗಳು ಮತ್ತೊಂದು ವಿಷಕಾರಿಯಲ್ಲದ ಹಾವುಗಳು. ಹಾವುಗಳು ಕಚ್ಚಿದಾಗ ಅತೀ ಬೇಗನೆ ಚಿಕಿತ್ಸೆ ದೊರೆಯಬೇಕು.ಇಲ್ಲವಾದಲ್ಲಿ ಉಸಿರು ಚೆಲ್ಲುವ ಪ್ರಸಂಗ ಬರಬಹುದು.ಲಭ್ಯವಿರುವ ಮಾಹಿತಿ ಪ್ರಕಾರ ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು 1.25 ಲಕ್ಷ ಮಂದಿ ಹಾವಿನ ಕಡಿತಕ್ಕೆ ಒಳಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಬಾರದ ಲೋಕಕ್ಕೆ ತೆರಳುತ್ತಾರೆ. ಆದರೆ, ಒಂಟೆಯ ಕಣ್ಣೀರಿನ ಮೇಲೆ ನಡೆದ ಹೊಸ ಸಂಶೋಧನೆಯು ಜನರಲ್ಲಿ ಕೊಂಚ ರಿಲೀಫ್ ತಂದಿದೆ.
ಇಂಥದ್ದೊಂದು ಸಂಶೋಧನೆಯನ್ನು ದುಬೈನ ಕೇಂದ್ರೀಯ ಪ್ರಯೋಗಾಲಯದಲ್ಲಿ ಮಾಡಲಾಗಿದ್ದು, ಹಾವಿನ ವಿಷಕ್ಕೆ ಒಂಟೆಯ ಕಣ್ಣೀರನ್ನು ಬಳಸಿಕೊಂಡು ಪ್ರತಿವಿಷ ತಯಾರು ಮಾಡಬಹುದೆಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ದುಬೈ ಲ್ಯಾಬ್ನಲ್ಲಿ ಈ ವಿಚಾರವಾಗಿ ಸಂಶೋಧನೆ ನಡೆಯುತ್ತಿತ್ತು. ಆದರೆ, ಹಣದ ಕೊರತೆಯಿಂದ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಇಂದಿನ ಸಂಶೋಧನೆಯಿಂದ ಬಹುಶಃ ಲ್ಯಾಬ್ಗೆ ಹಣಕಾಸಿನ ನೆರವು ಸಿಕ್ಕಿದೆ. ಒಂಟೆಯ ಕಣ್ಣೀರಿನ ಮೇಲೆ ಮತ್ತಷ್ಟು ಸಂಶೋಧನೆ ನಡೆಯುವ ಸಾಧ್ಯತೆ ಇದೆ.
ಈ ಸಂಶೋಧನೆಯ ಮುಖ್ಯಸ್ಥರಾದ ಡಾ. ವಾರ್ನರ್ ಹೇಳುವ ಪ್ರಕಾರ ಒಂಟೆ ಕಣ್ಣೀರಿನಲ್ಲಿ ಪ್ರತಿವಿಷಗಳಿವೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ. ಒಂಟೆ ಕಣ್ಣೀರಿನಲ್ಲಿರುವ ಪ್ರೋಟೀನ್ಗಳು ಮಾನವರನ್ನು ಸೋಂಕಿನಿಂದ ರಕ್ಷಿಸುತ್ತದೆ. ಇದನ್ನು ಬಳಸಿಕೊಂಡ ಹಾವಿನ ವಿಷವನ್ನು ದೇಹದಿಂದ ತೆಗೆದುಹಾಕುವ ಪರಿಣಾಮಕಾರಿ ಔಷಧವನ್ನು ತಯಾರು ಮಾಡಬಹುದು ಎಂದು ಹೇಳಲಾಗಿದೆ. ಜಗತ್ತಿಗೆ ಇದನ್ನು ಪರಿಚಯಿಸಲು ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವಾರ್ನರ್ ಹೇಳಿದ್ದಾರೆ.ಇನ್ನೂ ಒಂಟೆಯ ಮೂತ್ರದಲ್ಲಿಯೂ ಔಷಧೀಯ ಗುಣಗಳಿರುವುದನ್ನು ಈ ಸಂಶೋಧನೆಗಳು ತೋರಿಸುತ್ತಿವೆ.
ಒಂಟೆಯ ಕಣ್ಣೀರಿನಲ್ಲಿ ಅನೇಕ ರೀತಿಯ ಅಗತ್ಯ ಪ್ರೋಟೀನ್ಗಳು ಕಂಡುಬರುತ್ತವೆ. ಇದು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ. ಒಂಟೆಯ ಕಣ್ಣೀರಿನಲ್ಲಿ ಕಂಡುಬರುವ ಲೈಸೋಜೈಮ್ಗಳು, ಬ್ಯಾಕ್ಟೀರಿಯಾ, ವೈರಸ್ ಸೇರಿದಂತೆ ಇತರೆ ಸೋಂಕುಗಳನ್ನು ತಡೆಯುತ್ತದೆ. ಕಣ್ಣೀರು ಮಾತ್ರವಲ್ಲ ಒಂಟೆ ಮೂತ್ರದಲ್ಲಿ ಔಷಧೀಯ ಶಕ್ತಿಯೂ ಇದೆ, ಇದನ್ನು ಹಿಂದಿನಿಂದಲೂ ಬಳಸಲಾಗುತ್ತಿದೆ. ಈ ಕಣ್ಣೀರು ಹಾವಿನ ವಿಷವನ್ನು ಸಹ ತೆಗೆದುಹಾಕುವಷ್ಟು ಪರಿಣಾಮಕಾರಿಯಾಗಿದೆ. ಭಾರತ ಮತ್ತು ಅಮೆರಿಕದಂತಹ ಅನೇಕ ದೇಶಗಳಲ್ಲಿ ಈ ವಿಷಯದ ಬಗ್ಗೆ ಸಂಶೋಧನೆಯೂ ನಡೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ. (ಏಜೆನ್ಸೀಸ್)