ನ್ಯೂಸ್ ನಾಟೌಟ್ : ಆಸ್ಪತ್ರೆಯ ಸಹಾಯಕಿ ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್ನಲ್ಲಿ ಕೂರಿಸಿ ಸುಟ್ಟ ಗಾಯ ಮಾಡಿದ್ದ ತಪ್ಪನ್ನು ಮರೆಮಾಚಲು ಮಗುವಿಗೆ ಎಪಿಡರ್ಮೊಲಿಸಿಸ್ ಬುಲ್ಲೋಸಾ ಚರ್ಮ ರೋಗ ಇರಬಹುದು ಎಂದು ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಜಿಲ್ಲಾ ಗ್ರಾಹಕರ ಆಯೋಗವು ₹10 ಲಕ್ಷ ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ.ಹಿರೇಮಠ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಕೃತ್ಯ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ ಶೇ 75 ಭಾಗ ಹಾಗೂ ಬಾಕಿ ಶೇ 25 ಭಾಗವನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗಾಗಿ ₹10 ಲಕ್ಷ ಪರಿಹಾರವನ್ನು ನೀಡಬೇಕು.
ತಪ್ಪಿದ್ದಲ್ಲಿ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ 8 ಬಡ್ಡಿ ಲೆಕ್ಕಹಾಕಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿ ಎಂಬವರ ಪತ್ನಿ ರೇಖಾ ಎಂಬವರನ್ನು 2019 ಡಿಸೆಂಬರ್ 10ರಂದು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ದಾಖಲಾದ ದಿನವೇ ರೇಖಾ ಹೆರಿಗೆಯಾಗಿತ್ತು.
ಹೆಣ್ಣು ಮಗು ಜನಿಸಿತ್ತು. ಡಿ.14 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕಿತ್ತು. ಬಿಸಿನೀರಿದ್ದ ಟಬ್ನಲ್ಲಿ ಮಗುವನ್ನು ಸ್ನಾನಕ್ಕೆ ಕೂರಿಸಿದ್ದರಿಂದ ಪೃಷ್ಠದ ಭಾಗ ಸುಟ್ಟು ಚರ್ಮ ಸುಲಿದಿತ್ತು. ಮಗುವಿನ ಪೋಷಕರು ವಿಷಯವನ್ನು ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಅಜಿತ್ ಜೋಶಿ, ಡಾ. ವಿದ್ಯಾ ಜೋಶಿ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಚರ್ಮರೋಗ ತಜ್ಞ ಡಾ.ರಂಜನ್ ಜೀವನ್ನವರ ಮಗುವನ್ನು ತಪಾಸಣೆ ಮಾಡಿ ಅದಕ್ಕೆ ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಚರ್ಮ ರೋಗ ಇರಬಹುದು ಎಂದು ಹೇಳಿ, ಬೆಂಗಳೂರಿನ ಹ್ಯೂಮನ್ಜೆನಟಿಕ್ ಸೆಂಟರ್ನಲ್ಲಿ ಜೆನಟಿಕ್ ಪರೀಕ್ಷೆಗೆ ಸೂಚಿಸಿದರು. ವಿನಯ ಹಂಜಿ ಪತ್ನಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಿದರು.
ಎಸ್ಡಿಎಂ ಆಸ್ಪತ್ರೆಯಲ್ಲಿ ಮಗುವಿನ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದರು. ಮಗು ಗುಣಮುಖವಾಯಿತು. ವಿನಯ ಹಂಜಿ ಹುಬ್ಬಳ್ಳಿಯ ಸಿಟಿ ಕ್ಲಿನಿಕ್, ಏಳು ವೈದ್ಯರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಸ್ಪತ್ರೆಗೆ ವಿಮೆ ನೀಡಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯನ್ನು ಒಂಬತ್ತನೇ ಎದುರುದಾರರನ್ನಾಗಿ ಮಾಡಲಾಗಿತ್ತು. ವಿಚಾರಣೆ ನಡೆಸಿದ ಆಯೋಗವು ಮಗುವಿಗೆ ಎಪಿಡರ್ಮೊಲಿಸಿಸ್ ಬುಲ್ಲೋಸಾ ಚರ್ಮ ಕಾಯಿಲೆ ಇರಬಹುದು ಎಂದು ಸುಳ್ಳು ಹೇಳಿರುವುದು, ಆಸ್ಪತ್ರೆ ಸಹಾಯಕಿ ಮಾಡಿದ ತಪ್ಪನ್ನು ಮುಚ್ಚಿಹಾಕಲು ಯತ್ನಿಸಿದ್ದು ತಿಳಿದಿದೆ. ಈ ಹೊಣೆಯನ್ನು ಸಿಟಿ ಕ್ಲಿನಿಕ್ ಮಾಲೀಕರು ಹೊರಬೇಕು. ಸಿಟಿ ಕ್ಲಿನಿಕ್ ಸೇವಾ ನ್ಯೂನತೆ ಎಸಗಿದೆ ಎಂದು ತಿಳಿಸಲಾಗಿದೆ. ಮತ್ತು ಅದಕ್ಕೆ ೧೦ ಲಕ್ಷ ರೂ ಪರಿಹಾರ ನೀಡಬೇಕೆಂದು ಖಡಕ್ಕ್ ಆದೇಶ ನೀಡಿದೆ.