ಸಿಎಂ ಸಿದ್ದರಾಮಯ್ಯಗೆ ದಂಡ ವಿಧಿಸಿದ್ದ ಹೈಕೋರ್ಟ್‌..! ಸುಪ್ರಿಂ ಕೋರ್ಟ್ ನಿಂದ ತಡೆ, ಏನಿದು ಪ್ರಕರಣ..?

ನ್ಯೂಸ್ ನಾಟೌಟ್: ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮ್ಯಯ ಮತ್ತು ಇತರ ನಾಯಕರಿಗೆ ತಲಾ ₹10 ಸಾವಿರ ದಂಡ ವಿಧಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌, ಮಾರ್ಚ್‌ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪಿ. ಕೆ. ಮಿಶ್ರಾ ಪೀಠ ಕರ್ನಾಟಕ ಸರ್ಕಾರ ಮತ್ತು ಪ್ರಕರಣದ ದೂರುದಾರರಿಗೆ ನೋಟಿಸ್‌ ಜಾರಿ ಮಾಡಿದೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹ * ತ್ಯೆ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ 2022ರ ಏಪ್ರಿಲ್ 14ರಂದು ಬೆಂಗಳೂರಿನ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಿದ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 143 (ಕಾನೂನು ಬಾಹಿರವಾಗಿ ಸಮಾವೇಶಗೊಳ್ಳುವುದು) ಮತ್ತು ಕರ್ನಾಟಕ ಪೊಲೀಸ್‌ ಕಾಯ್ದೆಯ ಕಲಂ 103ರ ಅಡಿ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ. ‘ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಯನ್ನು ಯಾವುದೇ ಸಮರ್ಥನೆ ನೀಡದೆ ಪ್ರತಿವಾದಿಯನ್ನಾಗಿ ಹೆಸರಿಸಲಾಗಿದೆ’ ಎಂಬ ಕಾರಣಕ್ಕೆ ಎಲ್ಲ ಅರ್ಜಿದಾರರಿಗೂ ಹೈಕೋರ್ಟ್‌ ತಲಾ ₹ 10 ಸಾವಿರ ದಂಡ ವಿಧಿಸಿತ್ತು. ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು, ಈಗ ಸುಪ್ರಿಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ ಮತ್ತು ಮಾರ್ಚ್‌ 6ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.