ನ್ಯೂಸ್ ನಾಟೌಟ್: ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ವರೆಗೂ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ.ಮನೆಯ ವಾರ್ಷಿಕ ವಿದ್ಯುತ್ ಬಳಕೆಯ ಆಧಾರದ ಮೇಲೆ ಶೇ. 10 ರಷ್ಟು ಹೆಚ್ಚುವರಿ ಸೇರಿ 200 ಯುನಿಟ್ವರೆಗೂ ವಿದ್ಯುತ್ ಉಚಿತ ನೀಡಲಾಗುತ್ತಿದ್ದು ಸದ್ಯ ರಾಜ್ಯ ಸರ್ಕಾರ ಈ ಯೋಜನೆಯಲ್ಲಿ ಕೊಂಚ ಬದಲಾವಣೆ ತಂದಿದೆ.ಬಾಡಿಗೆ ಮನೆಯಲ್ಲಿ ವಾಸಿಸುವವರು ನಿಟ್ಟುಸಿರು ಬಿಡುವಂತಾಗಿದೆ.ಅದು ಯಾಕೆ ಅಂತಿರಾ? ಈ ವರದಿ ನೋಡಿ..
ಗೃಹ ಜ್ಯೋತಿ ಯೋಜನೆ ಫಲಾನುಭವಿಗಳು ಇನ್ನು ಮುಂದೆ ಬಾಡಿಗೆ ಮನೆ ಬದಲಾವಣೆ ಮಾಡಿದರೆ ಚಿಂತಿಸಬೇಕಿಲ್ಲ. ಮನೆ ಬದಲಾಯಿಸಿದವರು ಕೂಡಲೇ ಹಳೆ ಮನೆಯ ವಿಳಾಸದ ವಿದ್ಯುತ್ ಸಂಪರ್ಕವನ್ನು ರದ್ದುಪಡಿಸಿ, ಹೊಸ ಮನೆಯ ವಿಳಾಸಕ್ಕೆ ರೀ-ಲಿಂಕ್ ಮಾಡಿಕೊಂಡು ಯೋಜನೆಯ ಫಲ ಪಡೆಯಬಹುದು. ಇದಕ್ಕಾಗಿ ಇಂಧನ ಇಲಾಖೆಯು ಡಿ ಲಿಂಕ್ ಆಯ್ಕೆ ನೀಡಿದೆ. ಗೃಹ ಜ್ಯೋತಿ ಯೋಜನೆ ಜಾರಿ ನಂತರ ಕೆಲ ಸಮಸ್ಯೆಗಳು ಎದುರಾಗಿದ್ದವು. ಬಾಡಿಗೆ ಮನೆಯಲ್ಲಿದ್ದವರು ನಾನಾ ಕಾರಣಗಳಿಂದ ಮನೆ ಬದಲಾಯಿಸುವ ಸಂದರ್ಭಗಳಲ್ಲಿ,ಈ ಹಿಂದೆ ಇದ್ದ ಮನೆಯ ವಿದ್ಯುತ್ ಸಂಪರ್ಕಕ್ಕೆ ಜೋಡಣೆಯಾಗಿದ್ದ ಆಧಾರ್ ಸಂಖ್ಯೆಯನ್ನು ರದ್ದುಪಡಿಸಲು ಆಗದೆ ಹೊಸ ಮನೆಗೆ ಗೃಹಜ್ಯೋತಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
ಈ ಸಮಸ್ಯೆಯನ್ನು ಅರಿತ ಸರ್ಕಾರ ಆರ್ಆರ್ ಸಂಖ್ಯೆಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಿ, ಸೇವಾ ಸಿಂಧು ಪೋರ್ಟಲ್ನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.ಬಾಡಿಗೆದಾರರು ತಮ್ಮ ಹಳೆ ನೋಂದಣಿ ರದ್ದುಪಡಿಸಿಕೊಂಡು ಹೊಸದಾಗಿ ಅರ್ಜಿ ಸಲ್ಲಿಸಬಹುದು. ಇನ್ನೊಂದು ವಾರದಲ್ಲೇ ಈ ಸೇವೆ ಆರಂಭವಾಗಲಿದ್ದು ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.ಅಗತ್ಯ ಕ್ರಮಕ್ಕೆ ಎಸ್ಕಾಂಗಳಿಗೂ ಸರ್ಕಾರ ಆದೇಶ ಹೊರಡಿಸಿದೆ.