ನ್ಯೂಸ್ ನಾಟೌಟ್: ವಿಧಾನ ಪರಿಷತ್ನ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಹೆಸರಲ್ಲಿ ಎರಡು ದಿನಗಳ ಕಾಲ ಅಂದರೆ ಪೂರ್ತಿ 48 ಗಂಟೆ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದೆ. ಅದನ್ನು ಮತದಾನ ದಿನಕ್ಕೆ ಸೀಮಿತವಾಗಿ ಕೇವಲ 18 ಗಂಟೆಗಳಿಗೆ ಇಳಿಸಿದೆ.
ಫೆಬ್ರವರಿ 16ರಂದು ನಡೆಯಲಿರುವ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಅಬಕಾರಿ ಇಲಾಖೆ ಅತ್ಯುತ್ಸಾಹದಿಂದ ಕ್ರಮ ಕೈಗೊಂಡು ಫೆಬ್ರವರಿ 14ರ ಸಂಜೆ ಆರು ಗಂಟೆಯಿಂದಲೇ ನಿರ್ಬಂಧವನ್ನು ಜಾರಿ ಮಾಡಿತ್ತು. ಫೆಬ್ರವರಿ 14ರಿಂದ ಫೆಬ್ರವರಿ 16ರಂದು ಚುನಾವಣೆ ಮುಗಿಯುವ ವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಿತ್ತು. ಈ ನಡುವೆ ಕೆಲವು ರೆಸ್ಟೋರೆಂಟ್ ಮಾಲೀಕರು ಇದು ಕಾನೂನುಬಾಹಿರ ನಿಯಮ ಎಂದು ಕೋರ್ಟ್ಗೆ ಹೋಗಿದ್ದ ಫಲವಾಗಿ ಈಗ ಬದಲಾವಣೆ ಮಾಡಲಾಗಿದೆ. ಮತದಾನದ ದಿನ ಮತ್ತು ಎಣಿಕೆ ದಿನದಂದು ಮಾತ್ರ ಮದ್ಯ ಮಾರಾಟ ನಿರ್ಬಂಧ ವಿಧಿಸಿದರೆ ಸಾಕು ಎಂದು ಹೈಕೋರ್ಟ್ ಸೂಚಿಸಿದೆ. ಮತದಾನ ನಡೆಯುವ ಫೆ.16ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿರ್ಬಂಧ ಮಾಡಬಹುದು. ಮತ ಎಣಿಕೆ ನಡೆಯುವ ಫೆ. 20ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿರ್ಬಂಧ ವಿಧಿಸಬಹುದು ಎಂದು ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದೆ.