ನ್ಯೂಸ್ ನಾಟೌಟ್ :ಬೀದಿ ನಾಯಿಗಳ ಹಾವಳಿ ಜೋರಾಗಿದೆ.ಇತ್ತೀಚೆಗೆ ಮಗುವೊಂದನ್ನು ಹಿಡಿದು ಕೊಂಡು ರಸ್ತೆ ಮೇಲೆ ಹೋಗುತ್ತಿದ್ದ ಮಹಿಳೆಯನ್ನು ಬೀದಿ ನಾಯಿಯೊಂದು ಬೆನ್ನಟ್ಟಿದ್ದ ದೃಶ್ಯ ವೈರಲ್ ಆಗಿತ್ತು.ನಾಯಿಯನ್ನು ಎಷ್ಟೇ ಓಡಿಸಿದ್ರೂ ಮಗುವಿನ ಕಾಲು ಕೈಯನ್ನು ಕಚ್ಚಲು ಪ್ರಯತ್ನ ಪಟ್ಟಿತ್ತು.ಇದೀಗ ಇದರ ಹಾವಳಿ ಮಂಗಳೂರಿನಲ್ಲಿಯೂ ಹೆಚ್ಚಾಗಿದೆ.
ಹೌದು,ಬೈಕ್, ಕಾರ್ಗಳು ಸೇರಿದಂತೆ ಮಾರ್ಗದಲ್ಲಿ ಓಡಾಡುತ್ತಿರುವ ವಾಹನಗಳನ್ನು ಬೆನ್ನಟ್ಟುದಲ್ಲದೆ, ಹಲವರ ಮೇಲೆರಗಿ ಕಚ್ಚಿ ಗಾಯಗೊಳಿಸುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಇದೀಗ ಮಂಗಳೂರಿನ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರಿಗೂ ಬೀದಿ ನಾಯಿ ಕಾಟ ಎದುರಾಗಿದೆ. ಬೀದಿ ನಾಯಿ ಕಚ್ಚಿದ್ದ ಪರಿಣಾಮ ಅವರು ಕಳೆದ ಇಪ್ಪತ್ತೈದು ದಿನಗಳಲ್ಲಿ ವ್ಹೀಲ್ ಚೆಯರ್ನಲ್ಲೇ ಓಡಾಟ ನಡೆಸುತ್ತಿದ್ದು ಸಂಕಷ್ಟದಲ್ಲಿದ್ದಾರೆ.
ಮಾಜಿ ಶಾಸಕ ಮೋಯ್ದಿನ್ ಬಾವಾ ಅವರು ನಗರದ ಕದ್ರಿ ಪಾರ್ಕ್ ನೊಳಗಡೆ ವಾಕಿಂಗ್ಗೆಂದು ಬಂದಿದ್ದರು. ಆಗ ಮೊಯ್ದೀನ್ ಬಾವಾ ಅವರಿಗೆ ನಾಯಿಯೊಂದು ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಪರಿಣಾಮ ಕಾಲಿನ ನರಕ್ಕೆ ಗಾಯವಾಗಿ ಅವರು ನಡೆಯಲಾರದಂಥಹ ಸ್ಥಿತಿಗೆ ತಲುಪಿದ್ದಾರೆ. ಕದ್ರಿ ಪಾರ್ಕ್ನೊಳಗಡೆ ಸಾಕು ನಾಯಿಗಳನ್ನು ತರುವಂತಿಲ್ಲ. ಆದರೆ ಪಾರ್ಕ್ನಲ್ಲಿ ಬೀದಿ ನಾಯಿಗಳ ಕಾಟ ವಾಯು ವಿಹಾರಿಗಳನ್ನು ಭೀತಿಗೆ ತಳ್ಳಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಮೊಯ್ದೀನ್ ಬಾವಾ ಅವರು ಕೂಡ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದು, ಈಗಾಗಲೇ ಡಿಸಿಯವರಿಗೆ, ಮನಪಾ ಕಮಿಷನರ್ ಅವರಿಗೆ ದೂರು ನೀಡಲಾಗಿದೆ. ಬೀದಿ ನಾಯಿಗಳ ಸಂತಾನ ಹೆಚ್ಚದಂತೆ ಕ್ರಮ ವಹಿಸಬೇಕು. ಅಲ್ಲದೇ ಬೀದಿಗಳಲ್ಲಿರುವ ನಾಯಿಗಳನ್ನು ಬೇರೆಡೆ ಕೊಂಡೊಯ್ದು, ಸಾಕುವುದಕ್ಕೆ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.