ನ್ಯೂಸ್ ನಾಟೌಟ್: ಬೇಸಿಗೆ ಆರಂಭದಲ್ಲಿಯೇ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತಿದ್ದು. ಇನ್ನೊಂದೆಡೆ ನದಿಯಲ್ಲಿ ನೀರು ಕಡಿಮೆದ ತಕ್ಷಣ ಮುಂದಾಲೋಚನೆಯೂ ಇಲ್ಲದೆ ಸಿಡಿ ಮದ್ದು ಸಿಡಿಸಿ ಮೀನು ಹಿಡಿಯುವ ಕೆಲಸಕ್ಕೆ ಕೆಲವರು ಮುಂದಾಗಿರುವುದು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಕಾವೇರಿ ನದಿ ವ್ಯಾಪ್ತಿಯಲ್ಲಿ ಕಂಡು ಬಂದಿದೆ.
ಆದರೆ ಇಂತಹ ಪ್ರಕರಣಗಳು ಬೆಳಕಿಗೆ ಬರದೆ ಹಲವು ಕಡೆಗಳಲ್ಲಿ ನಡೆಯುತ್ತಿದೆ. ಕಿಡಿಗೇಡಿಗಳು ರಾತ್ರಿ ವೇಳೆಯಲ್ಲಿ ಯಾರೂ ಇಲ್ಲದ ಸಂದರ್ಭ ನೀರು ನಿಲ್ಲುವ ಪ್ರದೇಶಗಳಲ್ಲಿ ಸಿಡಿಮದ್ದು ಸಿಡಿಸಿ ಮೀನುಗಳ ಮಾರಣ ಹೋಮ ಮಾಡುತ್ತಿದ್ದು, ಮದ್ದಿನ ಸ್ಪೋಟಕ್ಕೆ ಸಿಲುಕಿ ಸತ್ತ ಮೀನುಗಳು ನೀರಿನಲ್ಲಿ ತೇಲಿ ಬರುತ್ತಿದ್ದು, ಅಕ್ರಮವಾಗಿ ಸಿಡಿ ಮದ್ದು ಬಳಸಿ ಮೀನು ಹಿಡಿಯುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ವ್ಯಾಪ್ತಿಯ ಜನರು ಒತ್ತಾಯಿಸುತ್ತಿದ್ದಾರೆ. ಕೆಲವು ದುಷ್ಕರ್ಮಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀರಿನಲ್ಲಿ ಸ್ಪೋಟಕ ಸಿಡಿಸಿ ಮೀನುಗಳನ್ನು ಹಿಡಿಯುತ್ತಿರುವುದರಿಂದ ಒಂದು ಕಡೆ ಮೀನುಗಳ ಮಾರಣ ಹೋಮ ನಡೆಯುತ್ತಿದ್ದರೆ, ಮತ್ತೊಂದೆಡೆ ಅಪಾಯದ ಭಯವೂ ಸ್ಥಳೀಯರನ್ನು ಕಾಡುತ್ತಿದೆ.
ಈ ವ್ಯಾಪ್ತಿಯಲ್ಲಿ ಸೇತುವೆ, ಅಣೆಕಟ್ಟೆಗಳು ಇರುವುದರಿಂದ ಸಿಡಿ ಮದ್ದಿನ ಸ್ಪೋಟಕ್ಕೆ ಅಪಾಯವುಂಟಾಗುವ ಭೀತಿಯನ್ನು ಅವರು ಹೊರ ಹಾಕುತ್ತಿದ್ದಾರೆ. ಇನ್ನು ಸಿಡಿಮದ್ದಿನ ಸ್ಫೋಟಕ್ಕೆ ಸಣ್ಣ ಮೀನಿನಿಂದ ಹಿಡಿದು ದೊಡ್ಡ ಮೀನುಗಳ ತನಕ ಸಾಯುತ್ತಿವೆ. ಇಷ್ಟೇ ಅಲ್ಲದೆ ನದಿ ಪಾತ್ರದಲ್ಲಿರುವ ಆಮೆ, ಕಪ್ಪೆ, ನೀರಾವು, ನೀರುನಾಯಿ, ಏಡಿ, ಸಿಗಡಿ ಸೇರಿದಂತೆ ವಿವಿಧ ರೀತಿಯ ಜಲಚರಗಳು ಸಾವನ್ನಪ್ಪುತ್ತಿವೆ. ಇದರಿಂದ ಮೀನಿನ ಸಂತತಿ ನಶಿಸುವ ಆತಂಕ ಎದುರಾಗಿದೆ. ಅಲ್ಲದೆ ಆಹಾರ ಅರಸಿ ಹಾಗೂ ವಂಶಾಭಿವೃದ್ಧಿಗೆಂದು ದೇಶದ ಹಲವು ಭಾಗಗಳಿಂದ ಬಂದು ಗೂಡು ಕಟ್ಟಿ ವಾಸಿಸುವ ಪಕ್ಷಿಗಳು, ಪ್ರಾಣಿಗಳು ಶಬ್ದಕ್ಕೆ ಹೆದರಿ ಓಡಿ ಹೋಗುತ್ತಿವೆ ಎಂದು ವರದಿ ತಿಳಿಸಿದೆ.