ನ್ಯೂಸ್ ನಾಟೌಟ್: ರೈಲು ಹಳಿ ಪಕ್ಕದಲ್ಲೇ ಗುಡಿಸಲಿನಲ್ಲಿ ವಾಸವಾಗಿದ್ದ ವೃದ್ಧ ದಂಪತಿಯ ಸಮಯ ಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಉಳಿದಿದೆ. ರೈಲು ಹಳಿ ತಪ್ಪಬಹುದು ಎಂಬ ಮುಂಜಾಗ್ರತೆಯಿಂದ ಚಲಿಸುತ್ತಿದ್ದ ರೈಲನ್ನು ತಡೆದು ನಿಲ್ಲಿಸಿದ್ದು, ಈ ಮೂಲಕ ಭಾರೀ ಅನಾಹುತ ತಪ್ಪಿಸಿದ್ದಾರೆ.
ಮಧ್ಯರಾತ್ರಿ ವೇಳೆ ರೈಲ್ವೆ ಹಳಿ ತಪ್ಪುವುದನ್ನು ನಿಲ್ಲಿಸಲು ಕೆಲವು ದೂರದವರೆಗೂ ಓಡಿದ ವಯಸ್ಸಾದ ದಂಪತಿ ಈ ಸಾಹಸ ಮಾಡಿದ್ದಾರೆ.ರೈಲ್ವೇ ಹಳಿ ಬಳಿ ವಾಸಿಸುತ್ತಿದ್ದ ದಂಪತಿಯನ್ನು ಷಣ್ಮುಗಯ್ಯ ಮತ್ತು ಕುರುಂತಮ್ಮಾಳ್ ಎಂದು ಹೇಳಲಾಗಿದ್ದು, ತಡರಾತ್ರಿ ರೈಲ್ವೇ ಹಳಿ ಪಕ್ಕದಲ್ಲೇ ಇದ್ದ ತಮ್ಮ ಗುಡಿಸಲಿನಲ್ಲಿ ಮಲಗಿದ್ದರು. ಈ ವೇಳೆ ದಕ್ಷಿಣ ತಮಿಳುನಾಡಿನ ಸೆಂಗೊಟ್ಟೈಗೆ ಸಮೀಪವಿರುವ ಭಗವತಿಪುರಂ ರೈಲ್ವೆ ನಿಲ್ದಾಣದ ಬಳಿ ಘಾಟ್ ರಸ್ತೆಯಲ್ಲಿ ಕ್ರಾಶ್ ಬ್ಯಾರಿಯರ್ ಮುರಿದು ಪ್ಲೈವುಡ್ ಸಾಗಿಸುತ್ತಿದ್ದ ಟ್ರಕ್ ರೈಲು ಹಳಿ ಮೇಲೆ ಬಿದ್ದಿರುವುದನ್ನು ಗಮನಿಸಿದ್ದಾರೆ.
ಕೂಡಲೇ ರೈಲು ಬರುತ್ತಿರುವುದನ್ನು ಅರಿತ ದಂಪತಿ ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹಳಿ ಮೇಲೆ ಓಡಿದ್ದು, ಕುರುಂತಮ್ಮಾಳ್ ಅವರು ರೈಲಿಗೆ ಟಾರ್ಚ್ಲೈಟ್ ಬಿಟ್ಟಿದ್ದಾರೆ. ಇದನ್ನು ನೋಡಿದ ಲೊಕೊ ಪೈಲಟ್ ಕೂಡಲೇ ಬ್ರೇಕ್ ಹಾಕಿ, ನಿಲ್ಲಿಸಿದ್ದಾರೆ. ದಂಪತಿಗಳ ಸಮಯೋಚಿತ ನಿಲುವಿನಿಂದ ಹಳಿತಪ್ಪಬೇಕಿದ್ದ ರೈಲನ್ನು ಭಾರೀ ಅನಾಹುತದಿಂದ ತಪ್ಪಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ದಂಪತಿಗೆ ಧನ್ಯವಾದ ತಿಳಿಸಿದ್ದಾರೆ.